ಆಪರೇಷನ್ ಕಮಲ ಮಾಡಿದ್ದೇ ಮಿಸ್ಟರ್ ಯಡಿಯೂರಪ್ಪ: ಸದನದಲ್ಲಿ ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಆಪರೇಷನ್ ಕಮಲ ಮಾಡಿದ್ದೇ ಮಿಸ್ಟರ್ ಯಡಿಯೂರಪ್ಪ: ಸದನದಲ್ಲಿ ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 29: ರಾಜ್ಯದಲ್ಲಿ ಆಪರೇಶನ್ ಕಮಲ ಆರಂಭಿಸಿದ್ದೇ ಬಿಎಸ್ ಯಡಿಯೂರಪ್ಪನವರು. ರಾಜ್ಯದ ಜನತೆ ಯಾವತ್ತೂ ಬಿಜೆಪಿಯನ್ನು ಆಶೀರ್ವದಿಸಿ ಅಧಿಕಾರಕ್ಕೆ ತಂದಿಲ್ಲ, 2008 ರಲ್ಲಿ ಅವರಿಗೆ ದಕ್ಕಿದ್ದು 110 ಸ್ಥಾನ ಮಾತ್ರ. ಆಗಲೇ ಯಡಿಯೂರಪ್ಪ ಆಪರೇಶನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಮಾತಾಡಿದ ಸಿದ್ದರಾಮಯ್ಯ, ಇದುವರೆಗೆ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆಯೇ ಹೊರತು ಜನಾರ್ಶೀವಾದದೊಂದಿಗೆ ಮುಂಬಾಗಿಲಿಂದ ಬಂದು ಅಧಿಕಾರ ನಡೆಸಿಲ್ಲ. 2018ರಲ್ಲಿ ಬಿಜೆಪಿ ಸಿಕ್ಕಿದ್ದು 100 ಸೀಟು ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾವೂ ರಾಮನ ಭಕ್ತರೇ ಮಾತೆತ್ತಿದರೆ ಜೈಶ್ರೀರಾಮ್‌ ಅನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ. ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ- ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ನಾವು ರಾಷ್ಟ್ರಭಕ್ತರು. ಈ ದೇಶದ ಜನರನ್ನು ಪ್ರೀತಿಸುವವರು. ಎಲ್ಲ ಧರ್ಮದ ಜನರನ್ನು ಪ್ರೀತಿಸುವವರು ಕಾಂಗ್ರೆಸ್‌ ಪಕ್ಷದವರು. ಇವರ ತರ ಬುರ್ಖಾ ಹಾಕಿದವರು, ಟೋಪಿ ಹಾಕಿದವರು ಬರಬೇಕಾಗಿಲ್ಲ ಎನ್ನುವುದಿಲ್ಲ. ಸಬ್‌ ಕಾ ಸಾಥ್‌ ಎಂದವರು ಪೆಟ್ರೋಲ್‌ ಡೀಸೆಲ್‌ ಬೆಲೆ, ಗ್ಯಾಸ್‌ ಬೆಲೆ, ಅಗತ್ಯವಸ್ತುಗಳ ಬೆಲೆ ಏರಿಸಿದರು. ಬಡವರಿಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ನಾಲ್ಕರಿಂದ ಐದು ಸಾವಿರ ರೂ. ಕೊಡ್ತಾ ಇದ್ದೀವಿ. 1.2 ಕೋಟಿ ರೂ. ಕುಟುಂಬಗಳು ಅಂದರೆ ಸುಮಾರು 4.5 ಕೋಟಿ ಜನರಿಗೆ ಕೊಡ್ತಾ ಇದ್ದೀವಿ. ಈಗ ಅವರು ನಮ್ಮನ್ನು ಕಾಪಿ ಮಾಡುತ್ತಿದ್ಧಾರೆ. ಈಗ ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಈ ಮೋದಿ ಗ್ಯಾರಂಟಿಯಲ್ಲಿ ಶೇ. 50 ರಿಂದ 60 ರಷ್ಟು ಪಾಲು ಕರ್ನಾಟಕದ್ದೂ ಇದೆ. ಇವರು ಕನ್ನಡಿಗರಿಗೆ ದ್ರೋಹ ಮಾಡುತ್ತಿಲ್ಲವೇ? 25 ಜನ ಎಂಪಿಗಳು ಗೆದ್ದು ಹೋಗಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ಶಿಫಾರಸು ಮಾಡಿರುವ ಅನುದಾನ ಕೇಳಿದ್ದಾರೆಯೇ? ಅವರಿಗೆ ತಾಕತ್ತಿಲ್ಲ. ಬರ ಪರಿಹಾರಕ್ಕೆ ಪ್ರಸ್ತಾವನೆ ಅಕ್ಟೋಬರ್‌ ನಲ್ಲಿಯೇ ಕಳಿಸಿದ್ದೆವು. ನೇರವಾಗಿ ಪ್ರಧಾನಮಂತ್ರಿಯವರು ಹಾಗೂ ಅಮಿತ್‌ ಷಾ ಅವರನ್ನು ಭೇಟಿ ಮಾಡಿದೆ.

240 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಪರಿಹಾರ ನೀಡುವಂತೆ ಮನವಿ ಮಾಡಿದೆ. ಡಿಸೆಂಬರ್‌ 23ರಂದು ಸಭೆ ಕರೆಯುವುದಾಗಿ ಕೇಂದ್ರ ಸಚಿವರು ಹೇಳಿದರೂ ಈ ವರೆಗೆ ಸಭೆ ನಡೆಸಿಲ್ಲ. ನಾವು ತಾತ್ಕಾಲಿಕವಾಗಿ 33 ಲಕ್ಷ ರೈತರಿಗೆ ಪರಿಹಾರ ವಿತರಿಸಿದ್ದೇವೆ. ಈ ಸಂಸದರು ಈ ಬಗ್ಗೆ ಮೌನ ವಹಿಸಿದ್ದಾರೆ. ಕರ್ನಾಟಕದ ಜನ ಇವರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು. ಶಿಕ್ಷಣ, ಆರೋಗ್ಯ ಇಲಾಖೆ, ಕಾನೂನು ಸುವ್ಯವಸ್ಥೆ, ರಸ್ತೆಗಳಿಗೆ, ನೀರಾವರಿ, ಪಿಂಚಣಿ, ಗ್ರಾಮೀಣಾಭಿವೃದ್ಧಿ ಎಲ್ಲ ವಲಯಗಳಿಗೂ ಅನುದಾನ ಹೆಚ್ಚಾಗಿಯೇ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರದಿಂದ ಹಣ ಬರುತ್ತದೆ ಎಂದು ಪದೇ ಪದೇ ಹೇಳುತ್ತಾರೆ. ಈ ಹಣ ಯಾರಿಂದ ಬರುತ್ತದೆ? ನಮ್ಮ ತೆರಿಗೆಯಿಂದ. ಆದ್ದರಿಂದಲೇ ನಾವು ಹೇಳುವುದು ನಮ್ಮ ತೆರಿಗೆ ನಮ್ಮ ಹಕ್ಕು. ಸೆಸ್‌, ಸರ್ಚಾರ್ಜ್‌ ನಲ್ಲಿ ನಮಗೆ ಪಾಲು ಕೊಡುವುದಿಲ್ಲ. ಸೆಸ್‌, ಸರ್ಚಾರ್ಜ್‌ ಮೂಲ 5,52,000 ಕೋಟಿ ರೂ. ಸಂಗ್ರಹವಾಗಿದೆ. ಸೆಸ್‌ ಸರ್ಚಾರ್ಜ್‌ 1958 ರಿಂದ ವಿಧಿಸಲಾಗುತ್ತಿದೆ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ. ಆದರೆ 1999 ರ ವರೆಗೆ ಸೆಸ್‌ ಸರ್ಚಾರ್ಜ್‌ ನಲ್ಲಿ ರಾಜ್ಯಕ್ಕೆ ಪಾಲು ದೊರೆಯುತ್ತಿದ್ದು. ಸಂವಿಧಾನ ತಿದ್ದುಪಡಿ ಮಾಡಿ ಇದನ್ನು ಸ್ಥಗಿತಗೊಳಿಸಲಾಯಿತು.

ಕನಿಷ್ಠ ತೆರಿಗೆಯ 50% ಆದರೂ ನಮಗೆ ಕೊಡಬೇಕು. 4.71% ರಿಂದ 3.64% ಗೆ ಕಡಿಮೆಯಾಗಿದೆ.. ಇದರ ಅರಿವಾಗಿಯೇ 15ನೇ ಹಣಕಾಸು ಆಯೋಗ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿದ್ದು. ನಾವು ಸಾಲ ಮಾಡಿರುವುದು ನಿಜ. ಆದರೆ ಅದು ಜಿ.ಎಸ್.ಡಿ.ಪಿ.ಯ ಶೇ. 23.68 ರಷ್ಟಿದೆ. ಅಂದರೆ ಶೇ. 25ರ ಒಳಗೇ ಇದೆ. ವಿತ್ತೀಯ ಕೊರತೆ 2.95% ಇದೆ. ರಾಜಸ್ವ ಉಳಿತಾಯ ಇಲ್ಲ, ನಿಜ. ಆದರೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 5.1% ರಷ್ಟಿದೆ ಎಂದು ಹೇಳಿದರು.

Previous Post
BBMP: ಶೇ.60ರಷ್ಟು ಕನ್ನಡ ಕಡ್ಡಾಯ ಗಡುವು 2 ವಾರ ವಿಸ್ತರಣೆ
Next Post
ಅನರ್ಹತೆ: ಹೈಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್ ಬಂಡಾಯ ಶಾಸಕರು

Recent News