ಶಿಕ್ಷೆ ಕಡಿತ ಕೋರಿದ್ದ ಆಸಾರಾಂ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಶಿಕ್ಷೆ ಕಡಿತ ಕೋರಿದ್ದ ಆಸಾರಾಂ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ, ಮಾ. 1: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಶಿಕ್ಷೆ ಕಡಿತಗೊಳಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಮಹಾರಾಷ್ಟ್ರದ ಮಾಧವಬಾಗ್ ಹೃದ್ರೋಗ ಆಸ್ಪತ್ರೆಯಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸುವಂತೆ ಅಸಾರಾಂ ಪರ ಹಾಜರಿದ್ದ ವಕೀಲರು ಪೀಠವನ್ನು ಕೋರಿದರು. ಇದನ್ನು ರಾಜಸ್ಥಾನ ಹೈಕೋರ್ಟ್‌ನಲ್ಲೇ ಕೋರುವಂತೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿತು.
ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ವಿಳಂಬಗೊಳಿಸಲು ಅಸಾರಾಂ ಮಾಡಿದ ಉದ್ದೇಶಪೂರ್ವಕ ಪ್ರಯತ್ನಗಳನ್ನು ನ್ಯಾಯಮೂರ್ತಿ ಖನ್ನಾ ಅವರು ಇದೇ ವೇಳೆ ಉಲ್ಲೇಖಿಸಿದರು. ಅಸಾರಾಂ ಬಾಪು ಎಂದು ಜನಪ್ರಿಯರಾಗಿರುವ ಅಸುಮಲ್ ಹರ್ಪಲಾನಿ ಅವರನ್ನು ಜೋಧ್‌ಪುರದ ವಿಶೇಷ ಪೋಕ್ಸೊ ನ್ಯಾಯಾಲಯವು 2018ರಲ್ಲಿ ದೋಷಿ ಎಂದು ಘೋಷಿಸಿತ್ತು. 2013 ರಲ್ಲಿ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಆಸಾರಾಂ ಅಪರಾಧಿಯಾಗಿದ್ದಾರೆ. 2013ರಲ್ಲಿ 33 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ 2023ರಲ್ಲಿ ಆಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Previous Post
ಅನರ್ಹತೆ: ಹೈಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್ ಬಂಡಾಯ ಶಾಸಕರು
Next Post
ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ

Recent News