ಬಿಜೆಪಿಯ ಚುನಾವಣಾ ಬಾಂಡ್ ವಂಚನೆ ಪ್ರಕರಣ: ದೂರು ಹಿಂಪಡೆದ ಜಡ್ಜ್
ಹೈದರಾಬಾದ್, ಫೆ. 2: ಬಿಜೆಪಿಯ ಚುನಾವಣಾ ಬಾಂಡ್ಗಳ ಖರೀದಿ ಹೆಸರಿನಲ್ಲಿ 2.5 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿರುವ ಆಂಧ್ರಪ್ರದೇಶ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ತಾವು ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯುವಂತೆ ಹೈದರಾಬಾದ್ನ ಫಿಲ್ಮ್ ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಿವೃತ್ತ ನ್ಯಾಯಾಧೀಶರು ಈ ಕುರಿತು ಫೆಬ್ರವರಿ 27ರಂದು ಪೊಲೀಸ್ ದೂರು ದಾಖಲಿಸಿದ್ದರು. 2021ರಲ್ಲಿ ಹೈದರಾಬಾದ್ ಮೂಲದ ಅನಿಲ್ ಮತ್ತು ಶ್ರೀಧರ್ (ಹೆಸರು ಬದಲಾಯಿಸಲಾಗಿದೆ) ಎಂಬ ಇಬ್ಬರಿಗೆ ಹಣವನ್ನು ನೀಡಿದ್ದೇನೆ ಎಂದು ನ್ಯಾಯಾಧೀಶರು ಫೆಬ್ರವರಿ 28ರಂದು ಹೇಳಿದ್ದರು. ಎರಡು ವರ್ಷಗಳಿಂದ ಹಣವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದ್ದರೂ, ಪ್ರಯೋಜನವಾಗಿಲ್ಲ ಎಂದು ಹೇಳಿ, ಇಬ್ಬರು ವ್ಯಕ್ತಿಗಳ ವಿರುದ್ದ ನ್ಯಾಯಾಧೀಶರು ದೂರು ದಾಖಲಿಸಿದ್ದರು. ಇಬ್ಬರು ಆರೋಪಿಗಳ ಪೈಕಿ ಒಬ್ಬನಿಗೆ ಜಾಗತಿಕ ಹಿಂದೂ ಕಾಂಗ್ರೆಸ್ ಸಂಘಟನೆಯೊಂದಿಗೆ ಸಂಪರ್ಕವಿದೆ ಎನ್ನಲಾಗಿದೆ. ನ್ಯಾಯಾಧೀಶರು, ಆರೋಪಿತ ಇಬ್ಬರು ವ್ಯಕ್ತಿಗಳು ಆರೆಸ್ಸೆಸ್ನಲ್ಲಿ ‘ಪ್ರಮುಖ ನಾಯಕರು’ ಎಂದು ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿಗಳು ಹಣಕ್ಕೆ ಪ್ರತಿಯಾಗಿ, ಅಮೆರಿಕದಲ್ಲಿ ಅವರ ಮೊಮ್ಮಕ್ಕಳಿಗೆ ಕೆಲಸ ನೀಡಲಾಗುವುದು ಎಂದು ನ್ಯಾಯಾಧೀಶರಿಗೆ ಭರವಸೆ ನೀಡಿದ್ದರು. ಆರೋಪಿಗಳು ಒಂದಲ್ಲ ಒಂದು ರೀತಿಯಲ್ಲಿ ಹಣವನ್ನು ವಂಚಿಸುತ್ತಿದ್ದರು ಎಂದೂ ನ್ಯಾಯಾಧೀಶರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.
ದೂರನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಿ ನ್ಯಾಯಾಧೀಶರು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಅವರಿಗೆ ಬರೆದ ಪತ್ರದಲ್ಲಿ, ಒಬ್ಬ ಆರೋಪಿ ಹಾಗೂ ಆರೋಪಿಯ ಕುಟುಂಬದವರೊಂದಿಗೆ ಮಾತನಾಡಿದಾಗ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಅವರನ್ನು ನಂಬದಿರಲು ನನಗೆ ಯಾವುದೇ ಕಾರಣವಿಲ್ಲ, ಆದ್ದರಿಂದ ನಾನು ಎಫ್ಐಆರ್ ಸಂಖ್ಯೆ 164/24ನ್ನು ಹಿಂಪಡೆಯುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ದೂರು ಹಿಂಪಡೆಯಲು ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಪಶ್ಚಿಮ ವಲಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಜಯ್ ಕುಮಾರ್, ಈ ಕುರಿತು ತನಿಖೆ ಮುಂದುವರಿಯುತ್ತದೆ. ಒಮ್ಮೆ ಎಫ್ಐಆರ್ ದಾಖಲಾದ ನಂತರ, ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಪ್ರಕಾರ ತನಿಖೆಯನ್ನು ಕೈಗೊಳ್ಳಬೇಕಾಗುತ್ತದೆ. ನಂತರ ಪೊಲೀಸ್ ವರದಿಯನ್ನು ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಫಿಲ್ಮ್ ನಗರ್ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, ಸೆಕ್ಷನ್420(ವಂಚನೆ) ಸೆಕ್ಷನ್ 34ರಡಿ ಪ್ರಕರಣ ದಾಖಲಿಸಿಕೊಂಡಿದ್ದರು.