ಸನಾತನ ಕುರಿತು ಟೀಕೆ; ಉದಯನಿಧಿ ಸ್ಟಾಲಿನ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸನಾತನ ಕುರಿತು ಟೀಕೆ; ಉದಯನಿಧಿ ಸ್ಟಾಲಿನ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಚೆನ್ನೈ, ಮಾ. 6: ಸನಾತನ ಧರ್ಮದ ಕುರಿತಾದ ಟೀಕೆಗಳಿಗಾಗಿ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡ ಎರಡು ದಿನಗಳ ನಂತರ, ಇಂದು ಮದ್ರಾಸ್ ಹೈಕೋರ್ಟ್‌ ಅವರಿಗೆ ಸಣ್ಣ ರಿಲೀಫ್ ನೀಡಿದೆ. ಸ್ಟಾಲಿನ್ ಮತ್ತು ಇತರ ಇಬ್ಬರು ಡಿಎಂಕೆ ನಾಯಕರನ್ನು ಶಾಸಕರಾಗಿ ಮುಂದುವರಿಸುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ಇಂದು ವಜಾಗೊಳಿಸಿದೆ. ‘ಸ್ಟಾಲಿನ್ ಅವರ ಹೇಳಿಕೆಗಳು ತಪ್ಪು’ ಎಂದು ಗಮನಿಸಿದ ಹೈಕೋರ್ಟ್, ಆದರೆ ಅವರು ಇನ್ನೂ ಯಾವುದೇ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿಲ್ಲ’ ಎಂದು ಹೇಳಿದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರರಾಗಿರುವ 46 ವರ್ಷದ ಡಿಎಂಕೆ ನಾಯಕ, ಕಳೆದ ಸೆಪ್ಟೆಂಬರ್‌ನಲ್ಲಿ ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆಯನ್ನು ಬಲಪಂಥೀಯರು ಮತ್ತು ಹಿಂದುತ್ವವಾದಿಗಳು ವಿವಾದ ಮಾಡಿದ್ದರು. ಸನಾತನವು ಮಲೇರಿಯಾ ಮತ್ತು ಡೆಂಗ್ಯೂ ಇದ್ದಂತೆ, ಅದನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು’ ಎಂದು ಅವರು ಹೇಳಿದ ಮಾತುಗಳು ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಉದಯನಿಧಿ ಸ್ಟಾಲಿನ್ ಅಲ್ಲದೆ, ಅರ್ಜಿದಾರರು ರಾಜ್ಯ ಸಚಿವ ಪಿಕೆ ಸೇಕರ್ ಬಾಬು ಮತ್ತು ಡಿಎಂಕೆ ಸಂಸದ ಎ ರಾಜಾ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸುವಂತೆ ಕೋರಿದ್ದರು. ಉದಯನಿಧಿ ಹೇಳಿಕೆ ನೀಡಿದಾಗ ಬಾಬು ಉಪಸ್ಥಿತರಿದ್ದರು. ರಾಜಾ ಅವರು ಉದಯ್ ಹೇಳಿದ್ದನ್ನು ಅನುಮೋದಿಸಿದ್ದರು.
ಅವರ ಹೇಳಿಕೆಯನ್ನು ಬೆಂಬಲಿಸಿದ್ದ ರಾಜಾ, ‘ಸ್ಟಾಲಿನ್ ಅವರು ಜಾತಿ ಆಧಾರಿತ ತಾರತಮ್ಯವನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ಹಿಂದೂ ಧರ್ಮವನ್ನು ಅಲ್ಲ’ ಎಂದು ಹೇಳಿದ್ದಾರೆ. ಅವರು ಕಾನೂನು ಕ್ರಮ ಎದುರಿಸಲು ಸಿದ್ಧ; ಆದರೆ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ ಎಂದಿದ್ದರು. ಅವರ ಹೇಳಿಕೆಯ ಮೇಲಿನ ಗಲಾಟೆ ನಂತರ ದೇಶದ ಹಲವಾರು ರಾಜ್ಯಗಳಲ್ಲಿ ಪೊಲೀಸ್ ದೂರು ದಾಖಲಾಯಿತು. ಹಲವು ಎಫ್‌ಐಆರ್‌ಗಳನ್ನು ಒಟ್ಟಿಗೆ ಸೇರಿಸಬೇಕೆಂದು ಡಿಎಂಕೆ ನಾಯಕ ಈಗ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಇದಕ್ಕೆ ಸುಪ್ರೀಂ ಕೋರ್ಟ್ ಕಟುವಾಗಿ ಪ್ರತಿಕ್ರಿಯಿಸಿದ್ದು, ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಪೀಠವು ಅವರನ್ನು ತರಾಟೆಗೆ ತೆಗೆದುಕೊಂಡಿತು, ಸಚಿವರಾಗಿ ಅವರು ತಮ್ಮ ಮಾತಿನ ಪರಿಣಾಮಗಳ ಬಗ್ಗೆ ತಿಳಿದಿರಬೇಕು ಎಂದು ಹೇಳಿದರು. ನೀವು ಸಂವಿಧಾನದ ಆರ್ಟಿಕಲ್ 19(1)(ಎ) ಅಡಿಯಲ್ಲಿ ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ. ನೀವು ಆರ್ಟಿಕಲ್ 25ರ ಅಡಿಯಲ್ಲಿ ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ. ಈಗ ನೀವು ಆರ್ಟಿಕಲ್ 32 ರ ಅಡಿಯಲ್ಲಿ (ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು) ನಿಮ್ಮ ಹಕ್ಕನ್ನು ಚಲಾಯಿಸುತ್ತಿದ್ದೀರಾ? ನೀವು ಹೇಳಿದ್ದರ ಪರಿಣಾಮ ಏನು ಗೊತ್ತಾ? ನೀವು ಜನಸಾಮಾನ್ಯರಲ್ಲ, ಮಂತ್ರಿಯಾಗಿದ್ದೀರಿ, ಅದರ ಪರಿಣಾಮಗಳನ್ನು ನೀವು ತಿಳಿದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

Previous Post
ದೆಹಲಿ ಚಲೋ ಪ್ರತಿಭಟನೆಗೆ ಬೆದರಿದ ಕೇಂದ್ರ: ರೈತರ ಸಾಮಾಜಿಕ ಮಾದ್ಯಮ ಖಾತೆಗಳಿಗೆ ನಿರ್ಬಂಧ
Next Post
ಲೆಫ್ಟಿನೆಂಟ್ ಗವರ್ನರ್ ಭಾಷಣಕ್ಕೆ ಅಡ್ಡಿ ಏಳು ಮಂದಿ ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸಿದ ಹೈಕೋರ್ಟ್

Recent News