ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ
ಕೋಲ್ಕತ್ತಾ: ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್ನ ಹೌರಾ ಮೈದಾನ-ಎಸ್ಪ್ಲೇನೇಡ್ವರೆಗಿನ ಮಾರ್ಗವನ್ನು ಉದ್ಘಾಟಿಸಿದ ಮೋದಿ ಮಕ್ಕಳದೊಂದಿಗೆ ಮೆಟ್ರೋದಲ್ಲಿ ಸಂಚಾರ ಮಾಡಿದರು. ಈ ಕಾರ್ಯಕ್ರಮದಲ್ಲಿ ಮೋದಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 15,400 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣವಾಗಲಿರುವ ವಿವಿಧ ಮೂಲಸೌಕರ್ಯ ಕಾಮಗಾರಿಗೆ ಚಾಲನೆ ನೀಡಿದರು.
ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಹೂಗ್ಲಿ ನದಿಯು ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಪ್ರತ್ಯೇಕಿಸುತ್ತದೆ. ಈ ಎರಡು ನಗರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ.
ಈ ರೈಲು ಮಾರ್ಗ 16.6 ಕಿಲೋಮೀಟರ್ ಉದ್ದವನ್ನು ಹೊಂದಿದ್ದು 6 ನಿಲ್ದಾಣಗಳನ್ನು ಇರಲಿದೆ. 6 ನಿಲ್ದಾಣಗಳ ಪೈಕಿ 3 ನಿಲ್ದಾಣಗಳು ನೀರಿನ ಅಡಿಯಲ್ಲಿ ಮತ್ತು 3 ನಿಲ್ದಾಣಗಳು ನೆಲದ ಮೇಲೆ ನಿರ್ಮಾಣವಾಗಿದೆ. 4,965 ಕೋಟಿ ರೂ. ವೆಚ್ಚದಲ್ಲಿ 4.8 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಗೊಂಡಿದೆ. ನೆಲಮಟ್ಟದಿಂದ 30 ಮೀಟರ್ ಅಡಿಯಲ್ಲಿ ನಿಲ್ದಾಣ ನಿರ್ಮಾಣವಾಗುವ ಮೂಲಕ ಹೌರಾವು ಭಾರತದ ಆಳವಾದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಅಡಿಪಾಯವನ್ನು ಫೆಬ್ರವರಿ 2009 ರಲ್ಲೇ ಹಾಕಲಾಗಿತ್ತು. ಆದರೆ ನೀರೊಳಗಿನ ಮೆಟ್ರೋ ಸುರಂಗದ ನಿರ್ಮಾಣ ಕಾರ್ಯ 2017 ರಲ್ಲಿ ಆರಂಭವಾಗಿತ್ತು.