ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ರಾಜ್ಯ ಕೋರ್ ಕಮಿಟಿ ನಾಯಕರೊಂದಿಗೆ ಜೆ.ಪಿ ನಡ್ಡಾ ಸಭೆ
ನವದೆಹಲಿ : ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಿಸಿರುವ ಬಿಜೆಪಿ ಮೊದಲ ಹಂತದಲ್ಲಿ 16 ರಾಜ್ಯಗಳಲ್ಲಿ 195 ಕ್ಷೇತ್ರಗಳಿಗೆ ಹೆಸರು ಘೋಷಿಸಿತ್ತು, ಈಗ ಎರಡನೇ ಹಂತದ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು ಬುಧವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಏಳು ರಾಜ್ಯಗಳ ಕೊರ್ ಕಮಿಟಿ ನಾಯಕರ ಜೊತೆಗೆ ಸಭೆ ನಡೆಯಿತು.
ಸಭೆಯಲ್ಲಿ ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ, ಒಡಿಶಾ, ಹರಿಯಾಣ, ಹಿಮಾಚಲ, ಕರ್ನಾಟಕ, ಮಹಾರಾಷ್ಟ್ರ, ಚಂಡೀಗಢ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಕೋರ್ ಕಮಿಟಿ ನಾಯಕರು ಭಾಗಿಯಾಗಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿದರು.
ಕರ್ನಾಟಕದ 28 ಅಭ್ಯರ್ಥಿಗಳ ಆಯ್ಕೆ ಸಂಬಂಧವೂ ಜೆ.ಪಿ ನಡ್ಡಾ ಜೊತೆಗೆ ಪ್ರತ್ಯೇಕ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೋಟಾ ಶ್ರೀನಿವಾಸ್ ಪೂಜಾರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ, ಚು. ಉಸ್ತುವಾರಿ ರಾಧ ಮೋಹನ್ ದಾಸ್ ಸೇರಿ ಹಲವು ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಮುಖ್ಯವಾಗಿ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ, ಕೆಲವು ಸಂಸದರು ಆಡಳಿತ ವಿರೋಧಿ ಅಲೆ ಎದುರಿಸುತಿದಿದ್ದು ಇದನ್ನು ಮೀರಿ ಗೆಲ್ಲುವ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಕೆಲವು ಸಮೀಕ್ಷೆಗಳಲ್ಲೂ ಹಾಲಿ ಕೇಂದ್ರ ಸಚಿವರು ಸೇರಿ ಕೆಲ ಪ್ರಮುಖ ಸಂಸದರಿಗೆ ವಿರೋಧಿ ಅಲೆ ವ್ಯಕ್ತವಾಗಿದ್ದು ಅಭ್ಯರ್ಥಿಗಳ ಬದಲಾವಣೆ ಸಾಧ್ಯತೆ ಬಗ್ಗೆಯೂ ಪರಿಶೀಲನೆಯಾಗಿದೆ ಎಂದು ವಿಶ್ವಾಸನೀಯ ಮೂಲಗಳು ಹೇಳಿವೆ.
ಇನ್ನು ವಿಧಾನಸಭೆಯಲ್ಲಿ ಸೋತ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಸಿ.ಟಿ ರವಿ, ಡಾ.ಕೆ ಸುಧಾಕರ್, ಬಿ. ಶ್ರೀರಾಮುಲು, ಬಿ.ಸಿ ಪಾಟೀಲ್, ವಿ.ಸೋಮಣ್ಣ, ಮಾಧುಸ್ವಾಮಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಅಪ್ಪಚ್ಚು ರಂಜನ್ ಟಿಕೆಟ್ ಗಾಗಿ ಲಾಬಿ ಆರಂಭಿಸಿದ್ದು ಈ ಬಗ್ಗೆಯೂ ವರಿಷ್ಠರ ಗಮನಕ್ಕೆ ತರುವ ಪ್ರಯತ್ನವನ್ನು ರಾಜಗಯ ನಾಯಕರು ಮಾಡಿದ್ದಾರೆ.
ಇನ್ನು ವಯಸ್ಸಿನ ಕಾರಣ ಚುನಾವಣೆ ಸ್ಪರ್ಧಿಸಲು, ಜಿ.ಎಸ್ ಬಸವರಾಜು, ಶ್ರೀನಿವಾಸ ಪ್ರಸಾದ್ ಸೇರಿ ಕೆಲವು ಸಂಸದರು ನಿರಾಕರಿಸಿದ್ದು ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಬಗ್ಗೆ ಚರ್ಚೆಯಾಗಿದ್ದು ರಾಜ್ಯ ನಾಯಕರು ನೀಡುವ ಹೆಸರಿನ ಜೊತೆಗೆ ಸರ್ವೆ ಆಧರಿಸಲಾಗುವುದು ಎಂದು ವರಿಷ್ಠರು ಹೇಳಿದ್ದಾರೆ ಎನ್ನಲಾಗಿದೆ.