ಮಹಾರಾಷ್ಟ್ರ NDA ಕೂಟದಲ್ಲಿ ಬಗೆಹರಿಯದ ಸೀಟು ಹಂಚಿಕೆ

ಮಹಾರಾಷ್ಟ್ರ NDA ಕೂಟದಲ್ಲಿ ಬಗೆಹರಿಯದ ಸೀಟು ಹಂಚಿಕೆ

ಮುಂಬೈ, ಮಾ. 7: ಮಹಾರಾಷ್ಟ್ರದಲ್ಲಿ ಎನ್‌ಡಿಎ ಬಣಗಳಾದ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಹಾಗೂ ಎನ್‌ಸಿಪಿ (ಅಜಿತ್‌ ಬಣ) ನಡುವಿನ ಸೀಟು ಹಂಚಿಕೆ ಮಾತುಕತೆಯ ಸಭೆಯು ಮಂಗಳವಾರ ತಡರಾತ್ರಿವರೆಗೂ ನಡೆದರೂ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಸೀಟು ಹಂಚಿಕೆ ಬಿಕ್ಕಟ್ಟು ಬಗೆಹರಿಯುವ ಬದಲು ಮತ್ತಷ್ಟು ಕಗ್ಗಂಟಾಗಿದೆ ಎನ್ನಲಾಗಿದೆ.
ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವಿಸ್‌ ಹಾಗೂ ಅಜಿತ್‌ ಪವಾರ್‌ ಅವರ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಸಿದರು. ನಂತರ ಎರಡನೇ ಸುತ್ತಿನಲ್ಲಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರೊಂದಿಗೆ ಅಮಿತ್‌ ಶಾ ಮಾತುಕತೆ ನಡೆಸಿದರು. ಈ ಎರಡೂ ಸಭೆಗಳಲ್ಲಿ ಸೀಟು ಹಂಚಿಕೆ ಸಂಬಂಧ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಬುಧವಾರವೂ ಮಾತುಕತೆ ಮುಂದುವರಿಯಲಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಅಮಿತ್‌ ಶಾ ಅವರು ಶಿವಸೇನೆ, ಎನ್‌ಸಿಪಿ ಮುಂದಿಟ್ಟಿರುವ ಸೂತ್ರವನ್ನು ಶಿಂಧೆ ಮತ್ತು ಅಜಿತ್‌ ಪವಾರ್‌ ಒಪ್ಪಲು ತಯಾರಿಲ್ಲ. ನಮ್ಮಗೆ ಮತ್ತಷ್ಟು ಸೀಟುಗಳು ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಶಿವಸೇನೆ ಮೂಲಗಳಿಂದ ತಿಳಿದು ಬಂದಿದೆ. ಮೂರು ಪಕ್ಷಗಳ ಬಲ್ಲಮೂಲಗಳ ಪ್ರಕಾರ 48 ಲೋಕಸಭೆ ಕ್ಷೇತ್ರಗಳ ಪೈಕಿ, ಬಿಜೆಪಿ 30, ಶಿವಸೇನೆ 12, ಎನ್‌ಸಿಪಿ 6 ಸ್ಥಾನಗಳಲ್ಲಿ ಸ್ಫರ್ಧಿಸುವ ಸೂತ್ರವನ್ನು ಅಮಿತ್‌ ಶಾ ಅವರು ಶಿವಸೇನೆ, ಎನ್‌ಸಿಪಿ ಮುಂದಿಟ್ಟಿದ್ದಾರೆ. ಆದರೆ ಶಿವಸೇನೆ 18, ಎನ್‌ಸಿ‍ಪಿ 10 ಕ್ಷೇತ್ರಗಳಿಗೆ ಪಟ್ಟು ಹಿಡಿದಿವೆ. ಇತ್ತ ಇಷ್ಟೂ ಸ್ಥಾನಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡಲು ಬಿಜೆಪಿ ತಯಾರಿಲ್ಲ ಎಂದು ಪಡಣವೀಸ್‌ ಆಪ್ತರು ಮಾಹಿತಿ ನೀಡಿದ್ದಾರೆ. ಮತ್ತೆ ಸರಣಿ ಸಭೆಗಳನ್ನು ನಡೆಸಿ ಸೀಟು ಹಂಚಿಕೆ ಅಂತಿಮಗೊಳಿಸುವ ಸಾಧ್ಯತೆ ಇದೆ. ಈ ಬಿಕ್ಕಟ್ಟಿನಿಂದಾಗಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ ಎನ್‌ಡಿಎನಲ್ಲಿ ಬಿರುಕು ಸಹ ಮೂಡಬಹುದು ಎನ್ನಲಾಗುತ್ತಿದೆ.

Previous Post
ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ರಾಜ್ಯ ಕೋರ್ ಕಮಿಟಿ ನಾಯಕರೊಂದಿಗೆ ಜೆ.ಪಿ ನಡ್ಡಾ ಸಭೆ
Next Post
ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಮೋದಿ ಕಿ ಗ್ಯಾರಂಟಿ ಹೋರ್ಡಿಂಗ್‌ ಅಳವಡಿಕೆಗೆ ಸೂಚನೆ

Recent News