ರಾಜ್ಯಸಭೆಗೆ ಸುಧಾಮೂರ್ತಿ ನಾಮ ನಿರ್ದೇಶನ

ರಾಜ್ಯಸಭೆಗೆ ಸುಧಾಮೂರ್ತಿ ನಾಮ ನಿರ್ದೇಶನ

ನವದೆಹಲಿ: ಮಹಿಳಾ ದಿನಾಚರಣೆಯಂದೇ ಕೇಂದ್ರ ಸರ್ಕಾರ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಸಮಾಜ ಸೇವೆ ಮತ್ತು ಶಿಕ್ಷಣಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಮನಿರ್ದೇಶನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ.

ಭಾರತದ ರಾಷ್ಟ್ರಪತಿಗಳು ರಾಜ್ಯಸಭೆಗೆ ಸುಧಾಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುಧಾ ಮೂರ್ತಿಯವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ.
ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ ‘ನಾರಿ ಶಕ್ತಿ’ಗೆ ಪ್ರಬಲವಾದ ಸಾಕ್ಷಿಯಾಗಿದೆ. ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಉದಾಹರಣೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಮೋದಿ ಹಾರೈಸಿದ್ದಾರೆ. ಈ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರನ್ನು ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಧಾ ಮೂರ್ತಿ ರಾಜಾಕರಣದಲ್ಲಿ ಸೇವೆ ಮಾಡುವಂತ ಅವಕಾಶ ಸಿಗುತ್ತೆ ಅಂತ ನಾನು ಯೋಚನೆ ಮಾಡಿರಲಿಲ್ಲ. ಇವತ್ತು ಪ್ರಧಾನಿ ಮೋದಿಯವರು ಟ್ವೀಟ್‌ ಮಾಡಿದ ನಂತರ ವಿಚಾರ ತಿಳಿಯಿತು. ನಮ್ಮ ಕುಟುಂಬದವರಿಗೂ ಯಾರಿಗೂ ವಿಷಯ ಗೊತ್ತಿಲ್ಲ. ನನ್ನ ಕೈಯಲ್ಲಿ ಆಗುವಷ್ಟು ಕೆಲಸ ಮಾಡುತ್ತೇನೆ. ನನ್ನಿಂದ ಏನಾದರೂ ಸಹಾಯವಾಗಲಿ ಅಷ್ಟೇ ನಾನು ಬಯಸುತ್ತೇನೆ.

ಮೇಲ್ಮನೆ ಸದಸ್ಯೆಯಾಗಿ ನಾನು ಏನು ಮಾಡಬಲ್ಲೆ ಎಂಬುದನ್ನು ನೋಡಬೇಕಾಗಿದೆ. ಇದು ನನಗೆ ಹೊಸ ಕ್ಷೇತ್ರವಾಗಿದೆ. ಹಾಗಾಗಿ, ನಾನು ಮೊದಲು ಕುಳಿತು ಅಧ್ಯಯನ ಮಾಡಬೇಕು ಮತ್ತು ನಂತರ ನಾನು ಏನು ಮಾಡಲು ಸಾಧ್ಯ ಅಂತ ಗೊತ್ತಾಗುತ್ತದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪತ್ನಿ ಹೇಳಿದ್ದಾರೆ.

ಸುಧಾ ಮೂರ್ತಿಯವರು 19 ಆಗಸ್ಟ್ 1950 ರಂದು ಜನಿಸಿದರು, ಕಂಪ್ಯೂಟರ್ ಸೈನ್ಸ್ ಪದವಿಧರೆಯಾಗಿರುವ ಅವರು ಇನ್ಫೋಸಿಸ್ ಫೌಂಡೇಷನ್ ಸಾರ್ವಜನಿಕ ಆರೋಗ್ಯ ರಕ್ಷಣಾ ಉಪಕ್ರಮಗಳ ಸದಸ್ಯರಾಗಿದ್ದಾರೆ. ಅವರು ಹಲವಾರು ಅನಾಥಾಶ್ರಮಗಳನ್ನು ಸ್ಥಾಪಿಸಿದ್ದಾರೆ, ಗ್ರಾಮೀಣ ಅಭಿವೃದ್ಧಿಯ ಪ್ರಯತ್ನಗಳಲ್ಲಿ ಭಾಗವಹಿಸಿದ್ದಾರೆ, ಎಲ್ಲಾ ಕರ್ನಾಟಕ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಲೈಬ್ರರಿ ಸೌಲಭ್ಯಗಳನ್ನು ಒದಗಿಸುವ ಆಂದೋಲನವನ್ನು ಬೆಂಬಲಿಸಿದ್ದಾರೆ ಮತ್ತು ಹಲವು ಪುಸ್ತಕಗಳನ್ನು ಬರೆದಿದ್ದಾರೆ.

Previous Post
ಲೋಕಸಭಾ ಚುನಾವಣಾ ಪ್ರಚಾರ ಪ್ರಾರಂಭಿಸಿದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್
Next Post
ರಾಜ್ಯದಲ್ಲಿ ₹ 17,836 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 27,067 ಹೊಸ ಉದ್ಯೋಗ ಸೃಷ್ಟಿ: ಸಿಎಂ

Recent News