ಮಿತ್ರಪಕ್ಷಗಳ ಹುಡುಕಾಟದಲ್ಲಿ ಬಿಜೆಪಿ; ಪೂರ್ವ-ದಕ್ಷಿಣದ ಕಡೆ ಗಮನ

ಮಿತ್ರಪಕ್ಷಗಳ ಹುಡುಕಾಟದಲ್ಲಿ ಬಿಜೆಪಿ; ಪೂರ್ವ-ದಕ್ಷಿಣದ ಕಡೆ ಗಮನ

ಸಮೀಕ್ಷೆಗಳು ಮತ್ತೆ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತೆ ಅಂತ ಹೇಳುತ್ತಿದ್ದರೂ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಬಿಜೆಪಿ ಬಹುಮತ ಗಳಿಸುವ ಬಗ್ಗೆ ಭರವಸೆ ಇಲ್ಲ. ಇದೇ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತ್ರತ್ವದ ಜೆಡಿಯುವನ್ನು ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಸೆಳೆಯಲಾಯಿತು. ಜೆಡಿಯು ಎನ್‌ಡಿಎ ಮೈತ್ರಿಕೂಟಕ್ಕೆ ವಾಪಸ್ ಆಗುತ್ತಿದ್ದಂತೆ ನಿತೀಶ್ ಕುಮಾರ್ ಅವರ ಪರಮ ವಿರೋಧಿ ಚಿರಾಗ್ ಪಾಸ್ವಾನ್ ಬಿಜೆಪಿ ಜೊತೆಗೆ ಮುನಿಸಿಕೊಂಡಿದ್ದಾರೆ. ಈ ಬೆಳೆಯಣಿಗೆ ಬೆನ್ನಲ್ಲೇ ಚಿರಾಗ್ ಪಾಸ್ವಾನ್ ನೇತ್ರತ್ವದ ಲೋಕ ಜನ ಶಕ್ತಿ ಪಕ್ಷವನ್ನು ತನ್ನತ್ತ ಸೆಳೆಯಲು ಇಂಡಿಯಾ ಮೈತ್ರಿಕೂಟ ಪ್ರಯತ್ನಿಸುತ್ತಿದೆ. ಹಾಗಾಗಿ ಬಿಜೆಪಿ ಲೋಕ ಜನ ಶಕ್ತಿ ಪಕ್ಷವನ್ನು ಎನ್‌ಡಿಎ ಮೈತ್ರಿಕೂಟದಲ್ಲೇ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದೆ.
ತಾನು ಸ್ವತಂತ್ರವಾಗಿ ಬಹುಮತ ಗಳಿಸದಿದ್ದರೂ ಕಡೆಯ ಪಕ್ಷ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪ್ರಯತ್ನಿಸುತ್ತಿರುವ ಬಿಜೆಪಿ ಇತರೆ ಪ್ರಾದೇಶಿಕ ಪಕ್ಷಗಳನ್ನು ಒಲಿಸಿಕೊಳ್ಳಲು ಮುಂದಾಗಿದೆ. ಮುಖ್ಯವಾಗಿ ದೇಶದ ದಕ್ಷಿಣ ಮತ್ತು ಪೂರ್ವ ದಿಕ್ಕಿನಲ್ಲಿ ಪಕ್ಷದ ಬೆಳವಣಿಗೆ ಆಗದಿದ್ದರೆ ಕೇಂದ್ರದಲ್ಲಿ ಪ್ರಭಾವ ಉಳಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುವುದನ್ನು ಅರಿತಿರುವ ಬಿಜೆಪಿ ಈಗ ದಕ್ಷಿಣ ಮತ್ತು ಪೂರ್ವದ ಕಡೆಗೆ ಹೆಚ್ಚು ಗಮನ ಹಾರಿಸಿದೆ. ಮೊದಲ ಹಂತದಲ್ಲಿ ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಜತೆ ಮೈತ್ರಿ ಮಾಡಿಕೊಳ್ಳಲು ಭಾರಿ ಪ್ರಯತ್ನ ನಡೆಸಿತು. ಕಡೆಗೂ ಅದು ಸಾಧ್ಯವಾಗಲಿಲ್ಲ.
ಕಳೆದ ವಾರ ಭುವನೇಶ್ವರದಲಿರುವ ಸಿಎಂ ನವೀನ್ ಪಟ್ನಾಯಕ್ ಅವರ ಅಧಿಕೃತ ನಿವಾಸ ‘ನವೀನ್ ನಿವಾಸ್’ದಲ್ಲಿ ಬಿಜೆಡಿ ನಾಯಕರು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಬಿಜೆಪಿ ನಾಯಕರು ಸರಣಿ ಸಭೆ ನಡೆಸಿದ್ದಾರೆ. ಪರಿಣಾಮವಾಗಿ 15 ವರ್ಷಗಳ ಬಳಿಕ ಮತ್ತೆ ಬಿಜೆಪಿ ಮತ್ತು ಬಿಜೆಡಿ ಒಂದಾಗಬಹುದು ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಹಿಂದೆ 2009ರಲ್ಲಿ ಬಿಜೆಡಿ ಎನ್‌ಡಿಎ ಒಕ್ಕೂಟದಿಂದ ಹೊರ ನಡೆದಿತ್ತು. ಅದಾದ ಬಳಿಕ ಬಿಜೆಪಿ ಸ್ವತಂತ್ರವಾಗಿ ಒಡಿಶಾದ ಪಕ್ಷದ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿ ವಿಫಲವಾಗಿತ್ತು. ಸದ್ಯ ಒಡಿಶಾದಲ್ಲಿ ಬಿಜೆಡಿ ಪ್ರಾಬಲ್ಯ ಹೊಂದಿದೆ. ಇಲ್ಲಿನ 21 ಕ್ಷೇತ್ರಗಳ ಪೈಕಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಡಿ 12 ಮತ್ತು ಬಿಜೆಪಿ 8 ಸ್ಥಾನಗಳನ್ನು ಪಡೆದಿದ್ದವು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಡಿ 112 ಹಾಗೂ ಬಿಜೆಪಿ 23 ಸ್ಥಾನಗಳನ್ನು ಗೆದ್ದಿದ್ದವು. ಮೈತ್ರಿಯ ಒಪ್ಪಂದದಲ್ಲಿ ಬಿಜೆಪಿ ಬಹುಪಾಲು ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಡಿ ವಿಧಾನಸಭೆ ಸೀಟುಗಳ ಮೇಲೆ ಗಮನ ಹರಿಸಲಿದೆ ಎನ್ನಲಾಗುತ್ತಿತ್ತು. ಆದರೆ ಭುವನೇಶ್ವರ ಮತ್ತು ಪೂರಿ ಲೋಕಸಭಾ ಕ್ಷೇತ್ರಗಳ ಬಗ್ಗೆ ಒಮ್ಮತ ಮೂಡದೆ ಮೈತ್ರಿ ಆಗಿಲ್ಲ ಎಂದು ಗೊತ್ತಾಗಿದೆ.
1998ರಲ್ಲಿ ಉಭಯ ಪಕ್ಷಗಳ ಮೈತ್ರಿ ಏರ್ಪಟ್ಟಿತ್ತು.1998, 1999, 2004ರ ಲೋಕಸಭೆ ಹಾಗೂ 2000, 2004ರ ವಿಧಾನಸಭೆ ಚುನಾವಣೆಗಳಲ್ಲಿ ಈ ಪಾಲುದಾರಿಕೆ ಸಫಲವಾಗಿತ್ತು. ಎನ್‌ಡಿಎದ ಅತ್ಯಂತ ವಿಶ್ವಾಸಾರ್ಹ ಮಿತ್ರ ಪಕ್ಷ ಎನಿಸಿಕೊಂಡಿದ್ದ ಬಿಜೆಡಿ, ಸೀಟು ಹಂಚಿಕೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ 2009ರಲ್ಲಿ ಮೈತ್ರಿಯಿಂದ ಹೊರಬಂದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಾಲನ್ನು 63 ಸೀಟುಗಳಿಂದ 40 ಸೀಟುಗಳಿಗೆ ಇಳಿಸಬೇಕು ಹಾಗೂ ಲೋಕಸಭೆಯಲ್ಲಿ 9 ರಿಂದ 6ಕ್ಕೆ ತಗ್ಗಿಸಬೇಕು ಎಂಬ ಬಿಜೆಡಿ ಬೇಡಿಕೆಯನ್ನು ಬಿಜೆಪಿ ಒಪ್ಪಿರಲಿಲ್ಲ. ಇದರೊಂದಿಗೆ 11 ವರ್ಷಗಳ ಮೈತ್ರಿ ಸಾಂಗತ್ಯ ಮುರಿದುಬಿದ್ದಿತ್ತು. ಬಿಜೆಪಿ ತನ್ನ ಬೆಂಬಲ ವಾಪಸ್ ಪಡೆದಿದ್ದನ್ನು ‘ವಂಚನೆಯ ಕೃತ್ಯ’ ಎಂದು ಬಿಜೆಡಿ ಟೀಕಿಸಿತ್ತು. ಆದರೀಗ ಎರಡೂ ಪಕ್ಷಗಳಗೆ ಸೋಲುವ ಭೀತಿ ಶುರುವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಒಂದಾಗಿದ್ದವು. ಆದರೂ ಸಾಧ್ಯವಾಗಲಿಲ್ಲ.
ದಕ್ಷಿಣ ದಂಡಯಾತ್ರೆ
ಪೂರ್ವದಲ್ಲಿರುವ ಒಡಿಶಾ ಬಳಿಕ ಬಿಜೆಪಿ ಹೆಚ್ಚು ಗಮನ ಹರಿಸುತ್ತಿರುವುದು ದಕ್ಷಿಣದ ಕಡೆಗೆ. ಮೊದಲಿಗೆ ಈಗಾಗಲೇ ಪ್ರಾಬಲ್ಯ ಇರುವ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಲು ಗಮನ ಹರಿಸುತ್ತಿದೆ. ಅದಕ್ಕಾಗಿಯೇ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಜೊತೆಗೆ ಕರ್ನಾಟಕದ ಬಗ್ಗೆ ವಿಶೇಷ ಗಮನ ಹರಿಸಿದ ಕಾರಣಕ್ಕಾಗಿಯೇ ಮಾರ್ಚ್ 2ರಂದು ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾರೊಬ್ಬರ ಹೆಸರು ಇರಲಿಲ್ಲ. ಕರ್ನಾಟಕದ ವಿಷಯದಲ್ಲಿ ಎರಡು-ಮೂರು ಸಮಸ್ಯೆಗಳು ಬಿಜೆಪಿಯನ್ನು ಕಾಡುತ್ತಿವೆ. ಮೊದಲನೆಯದು ಜೆಡಿಎಸ್ ಗೆ ಎಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡಬೇಕು? ಹಳೆಯ ಮೈಸೂರು ಭಾಗದಲ್ಲಿ ಪಕ್ಷದ ನೆಲೆ ವೃದ್ಧಿಸಿಕೊಳ್ಳಲು ಸ್ವತಃ ಹೆಚ್ಚು ಸೀಟುಗಳಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿದ್ದ ಬಿಜೆಪಿಗೆ ಈಗ ಜೆಡಿಎಸ್ ಜೊತೆಗಿನ ಮೈತ್ರಿ ಬಿಸಿತುಪ್ಪವಾಗಿ ಪರಿಣಮಿಸಿದೆ.
ರಾಜ್ಯ ಬಿಜೆಪಿ ನಾಯಕರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಕಳುಹಿಸಿರುವ ಪಟ್ಟಿ ಬಗ್ಗೆ ಹೈಕಮಾಂಡ್‌ ನಾಯಕರಿಗೆ ಸಮಾಧಾನ ಇಲ್ಲ ಎಂದು ಹೇಳಲಾಗುತ್ತಿದೆ. ಹಾವೇರಿಯಿಂದ ಶಿವಕುಮಾರ್ ಉದಾಸಿ, ತುಮಕೂರಿನಿಂದ ಜಿಎಸ್ ಬಸವರಾಜು, ಚಿತ್ರದುರ್ಗದಿಂದ ಅಬ್ಬಯ್ಯ ನಾರಾಯಣಸ್ವಾಮಿ, ಚಮರಾಜನಗಾರದಿಂದ ವಿ. ಶ್ರೀನಿವಾಸ್ ಪ್ರಸಾದ್ ಹಾಗೂ ಚಿಕ್ಕಬಳ್ಳಾಪುರದಿಂದ ಬಚ್ಚೇಗೌಡ ಕಾಣಕ್ಕಿಳಿಯುವುದಿಲ್ಲ ಎಂದು ಹೇಳಿರುವುದರಿಂದ ಹೊಸ ಅಭ್ಯರ್ಥಿಗಳನ್ನು ಹುಡುಕುವುದು ಬಿಜೆಪಿ ಅನಿವಾರ್ಯವಾಗಿದೆ. ಇದರ ಜೊತೆಗೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲು ಮಾದಲೇಬೇಕಾದ ಅಗತ್ಯವೂ ಇದೆ.
ಬಿಜೆಪಿ ಹೈಕಮಾಂಡ್ 2024ರ ಚುನಾವಣೆಗೆ ಕರ್ನಾಟಕದಿಂದ ಕನಿಷ್ಟ ಎಂಟು ಹೊಸ ಮುಖಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಇದರಿಂದ ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಸಿಗುವುದು ಖಚಿತವಾಗಿದ್ದರೂ, ಕೆಲವರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಇದೆ. ಅವರನ್ನು ಸಮಾಧಾನಪಡಿಸಿ ಎನ್ನುವ ಸಂದೇಶ ರಾಜ್ಯ ನಾಯಕರಿಗೆ ಬಂದಿದೆಯಂತೆ. ಅದಾದ ಮೇಲೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟವಾಗುತ್ತೆ ಎನ್ನುವ ಮಾಹಿತಿಗಳು ಸಿಗುತ್ತಿವೆ.
ಟಿಡಿಪಿ-ಬಿಜೆಪಿ ಮೈತ್ರಿ
ಕರ್ನಾಟಕದ ನಂತರ ಆಂದ್ರದ ಬೆಳವಣಿಗೆಗಳನ್ನು ನೋಡುವುದಾದರೆ ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಮತ್ತೆ ಎನ್‌ಡಿಎ ತೆಕ್ಕೆಗೆ ಬಂದಿದೆ. ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಡೀಲ್ ಡನ್ ಆಗಿದೆ. ಬಿಜೆಪಿಗೆ ಅಂದ್ರದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಜೊತೆಗೆ ಹೂಗುವ ಮನಸ್ಸಿತ್ತು. ಆದರೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಇಷ್ಟ ಇಲ್ಲ. ಹಾಗಾಗಿ ಬಿಜೆಪಿ ಈಗ ತೆಲುಗು ದೇಶಂ ಪಕ್ಷದ ಜೊತೆ ಕೈಜೋಡಿಸಿದೆ.
2018ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಆಂದ್ರಕ್ಕೆ ಹಣಕಾಸಿನ ನೆರವು ನೀಡುವ ಬಗ್ಗೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಮೈತ್ರಿಕೂಟದಿಂದ ನಿರ್ಗಮಿಸುವವರೆಗೂ ಟಿಡಿಪಿಯು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಿರ್ಣಾಯಕ ಭಾಗವಾಗಿತ್ತು. ಈಗ ಮತ್ತೆ ಚುನಾವಣೆಗಳು ಸಮೀಪದಲ್ಲಿರುವಾಗ ಎರಡೂ ಪಕ್ಷಗಳು ಪರಸ್ಪರ ಒಟ್ಟಾಗಿವೆ. ಆಂಧ್ರಪ್ರದೇಶದಲ್ಲಿ 25 ಲೋಕಸಭೆ ಕ್ಷೇತ್ರಗಳನ್ನು ಹೊಂದಿದ್ದು ಬಿಜೆಪಿ ಎಂಟರಿಂದ ಹತ್ತು ಕಡೆ ಸ್ಪರ್ಧಿಸಲು ಉತ್ಸುಕವಾಗಿದೆ. ಕಡೆಗೆ ಬಿಜೆಪಿ ಐದರಿಂದ ಆರು ಲೋಕಸಭಾ ಸ್ಥಾನಗಳಿಗೆ ತೃಪ್ತಿಪಡಬಹುದು, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (ಜೆಎಸ್ಪಿ) ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ ಮತ್ತು ಟಿಡಿಪಿ ಉಳಿದವುಗಳನ್ನು ಉಳಿಸಿಕೊಳ್ಳುತ್ತದೆ. ವೈಜಾಗ್, ವಿಜಯವಾಡ, ಅರಕು, ರಾಜಂಪೇಟೆ, ರಾಜಮಂಡ್ರಿ, ತಿರುಪತಿ ಸೇರಿದಂತೆ ಪ್ರಮುಖ ಕ್ಷೇತ್ರಗಳು ಮತ್ತು ಒಂದು ಹೆಚ್ಚುವರಿ ಸ್ಥಾನವನ್ನು ಬಿಜೆಪಿ ಬಯಸುತ್ತಿದೆ ಎಂದು ವರದಿಯಾಗಿದೆ. ಎನ್‌ಡಿಎ ಮಾಜಿ ಸದಸ್ಯ ಜೆಎಸ್‌ಪಿ ಈಗಾಗಲೇ ಟಿಡಿಪಿಯೊಂದಿಗೆ ಕೈಜೋಡಿಸಿದೆ. ಬಿಜೆಪಿಯನ್ನು ಅನುಸರಿಸಲು ಸಕ್ರಿಯವಾಗಿ ಒತ್ತಾಯಿಸುತ್ತಿದೆ. ಕಲ್ಯಾಣ್ ಸ್ವತಃ ಅಮಿತ್ ಶಾ ಜೊತೆ ಮಾತನಾಡಿದ್ದಾರೆ. ಜೆಎಸ್‌ಪಿಗೆ ಮೂರು ಲೋಕಸಭೆ ಮತ್ತು 24 ವಿಧಾನಸಭೆ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ಟಿಎಂಸಿ-ಬಿಜೆಪಿ ಮೈತ್ರಿ
ಎನ್‌ಡಿಎ ಮೈತ್ರಿಕೂಟ ತಮಿಳುನಾಡಿನಲ್ಲಿ ತಮಿಳು ಮಾನಿಲಾ ಕಾಂಗ್ರೆಸ್ (ಟಿಎಂಸಿ) ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ‘ನಮ್ಮ ಪಕ್ಷ ಎನ್‌ಡಿಎ ಮೈತ್ರಿಕೂಟವನ್ನು ಸೇರಿಕೊಳ್ಳಲಿದೆ. ಆದರೆ ಎಷ್ಟು ಸ್ಥಾನದಲ್ಲಿ ಸ್ಪರ್ಧಿಸಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇತರ ಸಮಾನ ಮನಸ್ಕ ಪಾರ್ಟಿಗಳು ಬಿಜೆಪಿ ಮೈತ್ರಿಕೂಟ ಸೇರಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಪಕ್ಷದ ಮುಖ್ಯಸ್ಥ ಜಿ.ಕೆ. ವಾಸನ್ ಹೇಳಿದ್ದಾರೆ. ಬಿಜೆಪಿ ಮೈತ್ರಿಕೂಟಕ್ಕೆ ಸೇರುವ ನಿರ್ಧಾರವನ್ನು ವಾಸನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಟಿಎಂಸಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಪಕ್ಷವನ್ನು ತೊರೆಯುತ್ತಿರುವುದಾಗಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಟಿ.ಎನ್. ಅಶೋಕನ್ ಹೇಳಿದ್ದಾರೆ.

ಮಾರ್ಚ್ 1996ರಲ್ಲಿ ಸಂಸದರಾಗಿದ್ದ ಜಿ.ಕೆ. ಮೂಪನಾರ್ ಅವರು ತಮಿಳು ಮಾನಿಲ ಕಾಂಗ್ರೆಸ್ ಪಕ್ಷವನ್ನು ಹುಟ್ಟು ಹಾಕಿದ್ದರು. ಮೂಪನಾರ್ ನಿಧನದ ನಂತರ ಪಕ್ಷವು 2002ರಿಂದ 2014ರವರೆಗೆ ಕಾಂಗ್ರೆಸ್ ಜೊತೆ ವಿಲೀನಗೊಂಡಿತ್ತು. ಬಳಿಕ ಕಾಂಗ್ರೆಸ್ಸಿನಿಂದ ಹೊರಬಂದು ಎಐಎಡಿಎಂಕೆ ಜೊತೆ ಸೇರಿಕೊಂಡಿತ್ತು ಈಗ ಎನ್‌ಡಿಎ ಮೈತ್ರಿಕೂಟ ಸೇರಿದೆ. ದ್ರಾವಿಡ ರಾಜಕಾರಣದ ದಟ್ಟ ಪ್ರಭಾವ ಇರುವ ತಮಿಳುನಾಡಿನಲ್ಲಿ ಟಿಎಂಸಿ ಅಷ್ಟೇನೂ ಮಹತ್ವ ಹೊಂದಿಲ್ಲ. ಆದರೆ ಬಿಜೆಪಿಗೆ ಸಣ್ಣ ಪಕ್ಷವೂ ಇಲ್ಲಿ ದೊಡ್ಡ ಆಸರೆಯಾಗಿದೆ.
ಹರ್ಷವರ್ಧನ್, ಲೇಖಿಗೆ ಟಿಕೆಟ್ ಕೈ ತಪ್ಪಿದ್ದೇಕೆ?
ಕೇಂದ್ರ ಸಚಿವರಾಗಿದ್ದ ಡಾ. ಹರ್ಷವರ್ಧನ್ ಮತ್ತು ಮೀನಾಕ್ಷಿ ಲೇಖಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದು ಏಕೆ ಎಂದು ದೆಹಲಿ ಬಿಜೆಪಿ ನಾಯಕರಿಗೇ ಗೊತ್ತಿಲ್ಲ. ಏಕೆಂದರೆ ಇವರಿಬ್ಬರು ಕೂಡ ಸಂಘ ಪರಿವಾರಕ್ಕೆ ಹತ್ತಿರವಿದ್ದವರು. ಆದರೂ ಏಕೆ ಅವರಿಗೆ ಅವಕಾಶ ನೀಡಿಲ್ಲ ಎಂದು ಕೇಳುತಿದ್ದಾರೆ. ನವದೆಹಲಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದ ಮೀನಾಕ್ಷಿ ಲೇಖಿ ಬದಲು ಮಾಜಿ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್‌ ಅವರಿಗೆ ಟಿಕೆಟ್ ನೀಡಲಾಗಿದೆ. ಬಾನ್ಸುರಿ ಸ್ವರಾಜ್‌ ಅವರಿಗೆ ಟಿಕೆಟ್ ನೀಡಲು ಮೀನಾಕ್ಷಿ ಲೇಖಿ ಅವರಿಗೆ ಟಿಕೆಟ್ ತಪ್ಪಿಸಲಾಯಿತು ಅಂತಾ ಹೇಳಾಗುತ್ತಿದ್ದರೂ ಅದೇ ನಿಜವಾದ ಕಾರಣ ಆಗಿರಲಾರದು ಎಂದು ಬಿಜೆಪಿಯೊಳಗೆ ಚರ್ಚೆ ನಡೆಯುತ್ತಿದೆ. ರಮೇಶ್ ಬಿಧುರಿಗೆ ಟಿಕೆಟ್ ಕೈ ತಪ್ಪಿದ್ದಿಕ್ಕೆ ಅವರು ಲೋಕಸಭೆಯಲ್ಲಿ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಮಾತನಾಡಿದ್ದಕ್ಕೆ, ಬಿಎಸ್ಪಿ ನಾಯಕಿ ಮಾಯವತಿಯವರನ್ನು ಮೆಚ್ಚಿಸಲು ಎನ್ನುವ ಮಾತುಗಳು ಕೇಳಿಬರುತ್ತಿವೆ. ಯಾರಿಗೆ ಗೋತ್ತು ರಾಜಕೀಯದಲ್ಲಿ ಯಾವ್ಯಾವ ಹಿತಾಶಕ್ತಿಗಳು ಹೇಗೇಗೆ ಕೆಲಸ ಮಾಡುತ್ತವೆ ಅಂತಾ…
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಡಬಲ್ ಶಾಕ್
ಪಶ್ಚಿಮ ಬಂಗಾಳದ ಅಸನ್ಸೋಲ್‌ ಕ್ಷೇತ್ರದ ಟಿಕೆಟ್ ಪಡೆದಿದ್ದ ಭೋಜ್‌ಪುರಿ ನಟ, ಗಾಯಕ ಪವನ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪವನ್ ಸಿಂಗ್ ವಿರುದ್ದ ಚಿತ್ರಗಳಲ್ಲಿ ಬೆಂಗಾಲಿ ಮಹಿಳೆಯರನ್ನು ಕೀಳಾಗಿ ತೋರಿಸಿದ ಆರೋಪವಿದೆ. ಪವನ್ ಸಿಂಗ್‌ ಸ್ಪರ್ಧೆಯಿಂದ ಹಿಂದೆ ಸರಿದ ಬಗ್ಗೆ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ, “ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುವ ಮೊದಲೇ ಬಿಜೆಪಿ 1 ಸ್ಥಾನವನ್ನು ಬಿಟ್ಟುಕೊಟ್ಟಿದೆ” ಎಂದು ಕಿಚಾಯಿಸಿದ್ದರು. ಪ್ರತಿಕ್ರಿಯಿಸಿದ್ದ ಅಸನ್ಸೋಲ್‌ನ ಮಾಜಿ ಸಂಸದ ಹಾಗೂ ಪಶ್ಚಿಮ ಬಂಗಾಳದ ಹಾಲಿ ಸಚಿವ ಬಾಬುಲ್ ಸುಪ್ರಿಯೋ, ‘ಪವನ್ ಜಿ ಅವರಿಗೆ ಅಸನ್ಸೋಲ್‌ಗೆ ಸ್ವಾಗತ. ನಾನು ಅವರ ಬಗ್ಗೆ ಪರಿಶೀಲನೆ ಮಾಡಿಲ್ಲ, ಮಾಡಲು ಹೋಗೋದು ಇಲ್ಲ. ಆದರೆ, ಕೆಲವೊಂದು ವಿಡಿಯೋಗಳು ನಾನು ಹಂಚಿಕೊಂಡಿದ್ದೇನೆ. ಅದರಲ್ಲಿ ಪವನ್ ಅವರು ಮಹಿಳೆಯರಿಗೆ ಯಾವ ರೀತಿ ಗೌರವ ಕೊಡುತ್ತಾರೆ ಎನ್ನುವುದು ಸ್ಪಷ್ಟವಾಗಿ ಇದೆ. ಖಂಡಿತವಾಗಿಯೂ ಪ್ರಧಾನಿ ಮೋದಿ ಅವರು ಪವನ್ ಪರ ಪ್ರಚಾರಕ್ಕೆ ಬರಬಹುದು’ ಎಂದು ಟಾಂಗ್ ನೀಡಿದ್ದರು.
ಭೋಜ್‌ಪುರಿ ನಟ ಮತ್ತು ಗಾಯಕನಾಗಿರುವ ಪವನ್ ಸಿಂಗ್ ತನ್ನ ಚಿತ್ರ ಮತ್ತು ಹಾಡುಗಳಲ್ಲಿ ಬೆಂಗಾಲಿ ಮಹಿಳೆಯರನ್ನು ಕೀಳಾಗಿ ಚಿತ್ರಿಸಿದ್ದಾರೆ ಎಂಬ ಆರೋಪವಿದೆ. ಹಾಗಾಗಿ, ಅವರಿಗೆ ಬಿಜೆಪಿ ಟಿಕೆಟ್ ನೀಡಿದ ಬೆನ್ನಲ್ಲೇ ಟಿಎಂಸಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಪಶ್ಚಿಮ ಬಂಗಾಳದ ಸಂದೇಶ್‌ ಖಾಲಿಯಲ್ಲಿ ಸ್ಥಳೀಯ ಟಿಎಂಸಿ ನಾಯಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಮುಂದಿಟ್ಟುಕೊಂಡು ಕಳೆದ ಕೆಲ ದಿನಗಳಿಂದ ಬಿಜೆಪಿ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ಈ ಬೆನ್ನಲ್ಲೇ ಮಹಿಳೆಯರನ್ನುನ ಕೀಳಾಗಿ ಚಿತ್ರಿಸಿದ ಆರೋಪ ಹೊತ್ತಿರುವ ಪವನ್ ಸಿಂಗ್‌ಗೆ ಟಿಕೆಟ್ ನೀಡಿರುವುದು ಸ್ವತಃ ಬಿಜೆಪಿ ನಾಯಕರ ಅಸಮಧಾನಕ್ಕೆ ಕಾರಣವಾಗಿತ್ತು.
ಇದ್ದಿಗ ಪವನ್ ಸಿಂಗ್‌ ನೀಡಿದ ಶಾಕ್ ನಿಂದ ಹೊರಬರುವ ಮುನ್ನವೇ ಬಿಜೆಪಿಗೆ ಇನ್ನೊಂದು ಹಿನ್ನಡೆಯಾಗಿದೆ. ಪಶ್ಚಿಮ ಬಂಗಾಳದ ಜಾರ್‌ಗ್ರಾಮ್‌ ಕ್ಷೇತ್ರದ ಕುನಾರ್ ಹೆಂಬ್ರಮ್ ತನ್ನ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ವೈಯುಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಹೆಂಬ್ರಮ್ ಅವರು ದಿಢೀರ್ ರಾಜೀನಾಮೆ ನೀಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ, ಹೆಂಬ್ರಮ್ ಅವರು ‘ಚುನಾವಣೆಗೂ ಮುನ್ನವೇ ಸೋಲನ್ನು ಗ್ರಹಿಸಿ’ ರಾಜೀನಾಮೆ ನೀಡಿದ್ದಾರೆ ಎಂದಿದೆ.
ಜಾರ್‌ಗ್ರಾಮ್‌ ಕ್ಷೇತ್ರದಲ್ಲಿ ಬಿಜೆಪಿ ಸೋಲಲಿದೆ ಎಂದು ಹೆಂಬ್ರಮ್ ಅವರಿಗೆ ಗೊತ್ತಾಗಿದೆ. ಹಾಗಾಗಿ, ಅವರು ಮೊದಲೇ ರಾಜೀನಾಮೆ ನೀಡಿದ್ದಾರೆ ಎಂದು ಟಿಎಂಸಿ ಸಂಸದ ಸಂತಾನು ಸೇನ್ ಹೇಳಿದ್ದಾರೆ. ಮೊದಲ ಬಾರಿಗೆ ಸಂಸದರಾಗಿದ್ದ ಹೆಂಬ್ರಮ್ ಅವರು, ಮುಂದೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ. ಪುಸ್ತಕ ಬರೆಯಲು ಮತ್ತು ಸಮಾಜ ಸೇವೆ ಮಾಡಲು ನನ್ನ ಸಮಯವನ್ನು ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ.

Previous Post
ಮಾರ್ಚ್‌ 13ರ ಒಳಗಡೆ 100 ಹೆದ್ದಾರಿ ಯೋಜನೆ, 10 ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದಾರೆ ಮೋದಿ
Next Post
ಮೋದಿ ಜಪ ಮಾಡಿದರೆ ಗಂಡನಿಗೆ ರಾತ್ರಿ ಊಟ ನೀಡಬೇಡಿ – ಮಹಿಳೆಯರಿಗೆ ಕ್ರೇಜಿವಾಲ್ ಕರೆ

Recent News