ಅಧೀರ್ ಚೌಧರಿ ಎದುರು ಯೂಸುಫ್ ಪಠಾಣ್‌ ಕಣಕ್ಕಿಳಿಸಿದ ದೀದಿ

ಅಧೀರ್ ಚೌಧರಿ ಎದುರು ಯೂಸುಫ್ ಪಠಾಣ್‌ ಕಣಕ್ಕಿಳಿಸಿದ ದೀದಿ

ಕೋಲ್ಕತ್ತಾ, ಮಾ. 11: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್‌ ನಾಯಕ ಅಧೀರ್ ಚೌಧರಿ ನಡುವೆ ನಡೆಯುತ್ತಿದ್ದ ಜಟಾಪಟಿ ಯೂಸುಫ್ ಪಠಾಣ್ ಅವರನ್ನು ಟಿಎಂಸಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಮತ್ತಷ್ಟು ತಾರಕಕ್ಕೇರಿದೆ. ಯೂಸುಫ್ ಪಠಾಣ್ ಅವರಿಗೆ ಬಹರಂಪುರ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ ನೀಡಿದೆ. ಬಹರಂಪುರ ಕ್ಷೇತ್ರ 5 ಅವಧಿಗಳ ಕಾಲ ಅಧೀರ್‌ ಚೌಧರಿ ಅವರು ಕಾಂಗ್ರೆಸ್‌ನಿಂದ ಪ್ರತಿನಿಧಿಸಿದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಯೂಸುಫ್ ಪಠಾಣ್ ಅವರನ್ನು ಟಿಎಂಸಿ ಕಣಕ್ಕಿಳಿಸಿರುವುದು ಅಧೀರ್ ಚೌಧರಿಗೆ ದೊಡ್ಡ ಹೊಡೆತವನ್ನು ನೀಡುವ ಟಿಎಂಸಿಯ ತಂತ್ರದ ಭಾಗವಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಧೀರ್ ಚೌಧರಿ, ಬಹರಂಪುರ ಕ್ಷೇತ್ರದಲ್ಲಿ ಯೂಸುಫ್ ಪಠಾಣ್ ಅವರನ್ನು ಅಭ್ಯರ್ಥಿಯಾಗಿ ನೇಮಿಸುವ ಮೂಲಕ ಮಮತಾ ಬ್ಯಾನರ್ಜಿ ಮೋದಿಗೆ, ನನ್ನ ಬಗ್ಗೆ ಅಸಮಾಧಾನಗೊಳ್ಳಬೇಡಿ, ನಾನು ಬಿಜೆಪಿ ವಿರುದ್ಧ ಹೋರಾಡಲು ನಿಂತಿಲ್ಲ ಎಂದು ಸಂದೇಶ ಕಳುಹಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜನಸಾಮಾನ್ಯರನ್ನು ಧ್ರುವೀಕರಿಸಲು ಮತ್ತು ಬಿಜೆಪಿಗೆ ಸಹಾಯ ಮಾಡಲು ಇರ್ಫಾನ್‌ ಪಠಾಣ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ, ಇದರಿಂದ ಕಾಂಗ್ರೆಸ್‌ನ್ನು ಸೋಲಿಸಬಹುದು. ಭಾರತದ ಯಾವುದೇ ರಾಜಕೀಯ ಪಕ್ಷಗಳು ತಮ್ಮಂತಹ ನಾಯಕರನ್ನು ನಂಬಬಾರದು ಎಂದು ಮಮತಾ ಬ್ಯಾನರ್ಜಿ ಇಂದು ಸಾಬೀತುಪಡಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಇಂಡಿಯಾ ಮೈತ್ರಿಯಲ್ಲಿ ಮುಂದುವರಿದರೆ, ಪ್ರಧಾನಿ ಮೋದಿ ಅತೃಪ್ತರಾಗುತ್ತಾರೆ ಎಂಬ ಭಯದಲ್ಲಿದ್ದಾರೆ. ಇಂಡಿಯಾ ಮೈತ್ರಿಕೂಟದಿಂದ ಬೇರ್ಪಡುವ ಮೂಲಕ ಅವರು ಪಿಎಂಒಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

ಯೂಸುಫ್ ಪಠಾಣ್ ಅವರನ್ನು ಟಿಎಂಸಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕಿತ್ತು ಅಥವಾ ಇಂಡಿಯಾ ಬ್ಲಾಕ್ ಮೂಲಕ ಗುಜರಾತ್‌ನಲ್ಲಿ ಸ್ಪರ್ಧೆಗಿಳಿಸಬೇಕಿತ್ತು. ಟಿಎಂಸಿ ಯೂಸುಫ್ ಪಠಾಣ್ ಅವರನ್ನು ಗೌರವಿಸಲು ಬಯಸಿದರೆ, ಅವರನ್ನು ರಾಜ್ಯಸಭೆಗೆ ಕಳುಹಿಸಬೇಕಿತ್ತು. ಮಮತಾ ಬ್ಯಾನರ್ಜಿ ಅವರಿಗೆ ಯೂಸುಫ್ ಪಠಾಣ್ ಬಗ್ಗೆ ಒಳ್ಳೆಯ ಉದ್ದೇಶವಿದ್ದರೆ, ಅವರಿಗೆ ಇಂಡಿಯಾ ಮೈತ್ರಿಯ ಜೊತೆ ಸ್ಥಾನ ಕೇಳುತ್ತಿದ್ದರು ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಟಿಎಂಸಿ 42 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹಲವು ಹೊಸ ಮುಖಗಳಿವೆ. ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಬಹ್ರಂಪುರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಟಿಕೆಟ್‌ ಘೋಷಣೆ ಬಳಿಕ ಪಠಾಣ್ ಅವರು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಸಂಸತ್ತಿನಲ್ಲಿ ಜನರ ಧ್ವನಿಯಾಗುವ ಜವಾಬ್ದಾರಿಯೊಂದಿಗೆ ತನ್ನನ್ನು ನಂಬಿದ್ದಕ್ಕಾಗಿ ಸಿಎಂಗೆ ಕೃತಜ್ಞತೆ ಸಲ್ಲಿಸುತ್ತೇನೆ, ಜನಪ್ರತಿನಿಧಿಗಳಾಗಿ, ಬಡವರು ಮತ್ತು ವಂಚಿತರನ್ನು ಮೇಲಕ್ಕೆತ್ತುವುದು ನಮ್ಮ ಕರ್ತವ್ಯ ಮತ್ತು ಅದನ್ನು ಸಾಧಿಸುವ ಇರಾದೆಯನ್ನು ತಾನು ಹೊಂದಿರುವುದಾಗಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಅಧೀರ್‌ ಚೌಧರಿ ಮತ್ತು ಟಿಎಂಸಿ ನಡುವೆ ಈ ಮೊದಲು ಕೂಡ ಜಟಾಪಟಿ ನಡೆದಿತ್ತು. ಬಂಗಾಳದಲ್ಲಿ ಮೈತ್ರಿ ಕಾರ್ಯರೂಪಕ್ಕೆ ಬರದಿರಲು ಅಧೀರ್ ರಂಜನ್ ಚೌಧರಿ ಕಾರಣ ಎಂದು ಓಬ್ರಿಯಾನ್ ಹೇಳಿದ್ದರು. ಚೌಧರಿ ಅವರು ಬಂಗಾಳದಲ್ಲಿ ಇಂಡಿಯಾ ಮೈತ್ರಿಯ ಸಮಾಧಿಗಾರ ಎಂದು ಕೂಡ ಟಿಎಂಸಿ ನಾಯಕರು ಈ ಮೊದಲು ಆರೋಪಿಸಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕರಾಗಿರುವ ಚೌಧರಿ ಅವರು ತೃಣಮೂಲ ಮುಖ್ಯಸ್ಥರನ್ನು “ಅವಕಾಶವಾದಿ” ನಾಯಕಿ ಎಂದು ಈ ಮೊದಲು ಕರೆದಿದ್ದರು. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಮಮತಾ ಇಲ್ಲದೆ ಇಂಡಿಯಾ ಮೈತ್ರಿ ಅಪೂರ್ಣ ಎಂದು ಹೇಳಿಕೊಂಡು ಟಿಎಂಸಿ ಜೊತೆಗಿನ ಡ್ಯಾಮೇಜ್‌ ಕಂಟ್ರೋಲ್‌ಗೆ ಪ್ರಯತ್ನಿಸಿದ್ದರು. ಬಂಗಾಳದಲ್ಲಿ ಕಾಂಗ್ರೆಸ್‌ಗಿಂತ, ಅಧೀರ್‌ ಚೌಧರಿ ವಿರುದ್ಧವೇ ಮಮತಾ ಮುನಿಸಿಕೊಂಡಿದ್ದು, ಅವರ ವಿರುದ್ಧ ಯೂಸುಫ್ ಪಠಾಣ್ ಅವರನ್ನು ಕಣಕ್ಕಿಳಿಸಲು ಕಾರಣ ಎಂದು ಹೇಳಲಾಗಿದೆ.

Previous Post
ಅನುಮಾನಗಳಿಗೆ ಎಡೆಮಾಡಿಕೊಡುತ್ತಿರುವ ನೂತನ ಚುನಾವಣಾ ಆಯುಕ್ತರ ನೇಮಕ ವಿಷಯ
Next Post
ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಿದ ಕೇಂದ್ರ

Recent News