ಚುನಾವಣಾ ಬಾಂಡ್: ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಿಂದ ರಾಷ್ಟ್ರಪತಿಗೆ ಪತ್ರ

ಚುನಾವಣಾ ಬಾಂಡ್: ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಿಂದ ರಾಷ್ಟ್ರಪತಿಗೆ ಪತ್ರ

ನವದೆಹಲಿ, ಮಾ. 13: ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಸೂಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ಆದಿಶ್ ಸಿ. ಅಗರ್ವಾಲ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್ ವಕೀಲರ ಸಂಘದ ಇತರ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಆದಿಶ್ ಅಗರ್ವಾಲ್ ಅವರು ರಾಷ್ಟ್ರಪತಿಗೆ ಬರೆದ ಪತ್ರಕ್ಕೂ ನಮಗೂ ಯಾವುದೇ ಸಂಬಧವಿಲ್ಲ ಎಂದು ಸಂಘದ ಗೌರವ ಕಾರ್ಯದರ್ಶಿ ರೋಹಿತ್ಪಾಂಡೆ ಪ್ರಕಟಣೆ ಹೊರಡಿಸಿದ್ದಾರೆ.
ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಮಾರ್ಚ್‌ 11ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಜಾರಿ ತಡೆ ಹಿಡಿಯುವಂತೆ ಆದಿಶ್ ಅಗರ್ವಾಲ್ ಅವರು ರಾಷ್ಟ್ರಪತಿಗೆ ಪತ್ರ ಬರೆದಿರುವುದು ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ. ಸುಪ್ರೀ ಕೋರ್ಟ್ ವಕೀಲರ ಸಂಘ ಅಥವಾ ಅಖಿಲ ಭಾರತ ವಕೀಲರ ಸಂಘದ ಲೆಟರ್ ಹೆಡ್‌ನಲ್ಲಿ 7 ಪುಟಗಳ ಪತ್ರ ಬರೆಯಲಾಗಿದೆ. ಪತ್ರದ ಕೊನೆಯಲ್ಲಿ ಆದಿಶ್ ಅಗರ್ವಾಲ್ ಅವರು ತಮ್ಮ ಅಧ್ಯಕ್ಷ ಹುದ್ದೆಯನ್ನು ಉಲ್ಲೇಖಿಸಿ ಸಹಿ ಹಾಕಿದ್ದಾರೆ ಎಂದು ರೋಹಿತ್ ಪಾಂಡೆ ಹೇಳಿದ್ದಾರೆ.
ಅಧ್ಯಕ್ಷ ಆದಿಶ್ ಅಗರ್ವಾಲ್ ಅವರಿಗೆ ವಕೀಲರ ಸಂಘದ ಹೆಸರಿನಲ್ಲಿ ಪತ್ರ ಬರೆಯಲು ಸಂಘದ ಸದಸ್ಯರು ಅನುಮತಿ ನೀಡಿಲ್ಲ. ಅವರು ಪತ್ರದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವೂ ಸಂಘದ ಸದಸ್ಯರದ್ದಲ್ಲ. ಆದಿಶ್ ಅಗರ್ವಾಲ್ ಅವರ ಪತ್ರ ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿದೆ ಮತ್ತು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಇದನ್ನು ವಕೀಲರ ಸಂಘ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲರ ಸಂಘದ ಲೆಟರ್ ಹೆಡ್‌ನಲ್ಲಿ ರೋಹಿತ್ ಪಾಂಡೆ ಪ್ರಕಟನೆ ಹೊರಡಿಸಿದ್ದಾರೆ. ಈ ಮೂಲಕ ಸಂಘದ ಅಧ್ಯಕ್ಷ ಸುಪ್ರೀಂ ಕೋರ್ಟ್ ಆದೇಶದ ವಿರುದ್ದ ರಾಷ್ಟ್ರಪತಿಗೆ ಪತ್ರ ಬರೆದಿರುವುದು ಅವರ ವೈಯುಕ್ತಿಕ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಂಘದ ಇತರ ಸದಸ್ಯರ ಅನುಮತಿ ಇಲ್ಲದೆ ಪತ್ರ ಬರೆದಿರುವ ಆದಿಶ್ ಅಗರ್ವಾಲ್ ಅವರ ನಡೆಯನ್ನು ಖಂಡಿಸಿದ್ದಾರೆ.
ದೇಣಿಗೆ ನೀಡಿದವರ ಹೆಸರು ಮತ್ತು ಅವರು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ಮೊತ್ತವನ್ನು ಬಹಿರಂಗಪಡಿಸಿದರೆ, ಅವರಿಂದ ಕಡಿಮೆ ದೇಣಿಗೆ ಪಡೆದ ಪಕ್ಷಗಳು ಕಿರುಕುಳ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ದೇಣಿಗೆ ಪಡೆಯುವಾಗ ಹೆಸರು ಬಹಿರಂಗಪಡಿಸುವುದಿಲ್ಲ ಎಂಬ ಮಾತು ಕೊಡಲಾಗಿತ್ತು. ಹೆಸರು ಬಹಿರಂಗಪಡಿಸಿದರೆ ವಚನ ಭಂಗ ಮಾಡಿದಂತೆ ಆಗುತ್ತದೆ ಎಂದು ಆದಿಶ್ ಅಗರ್ವಾಲ್ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ರೋಹಿತ್ ಪಾಂಡೆಯ ಪ್ರಕಟನೆ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು ಯಾಕೆ? ಅವರು ಪ್ರಚಾರಕ್ಕಾಗಿ ಬರೆದ್ರಾ? ಇಲ್ಲ, ಯಾರ ಸಲಹೆ ಮೇರೆಗೆ ಬರೆದ್ರಾ? ಎಂದು ಪ್ರಶ್ನಿಸಿದ್ದಾರೆ.

Previous Post
ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ
Next Post
ಸಿಎಎ ಬಿಜೆಪಿಯ ಮತಬ್ಯಾಂಕ್ ರಾಜಕಾರಣ: ಕೇಜ್ರಿವಾಲ್

Recent News