ಬಿಜೆಪಿಯಲ್ಲಿ ಅವಮಾನವಾದರೆ ನಮ್ಮ ಜೊತೆ ಸೇರಿ: ಗಡ್ಕರಿಗೆ ಉದ್ಧವ್ ಆಹ್ವಾನ

ಬಿಜೆಪಿಯಲ್ಲಿ ಅವಮಾನವಾದರೆ ನಮ್ಮ ಜೊತೆ ಸೇರಿ: ಗಡ್ಕರಿಗೆ ಉದ್ಧವ್ ಆಹ್ವಾನ

ನವದೆಹಲಿ, ಮಾ. 13: ನಿಮಗೆ ಅವಮಾನವಾದರೆ ಬಿಜೆಪಿ ತೊರೆಯಿರಿ ನಮ್ಮ ಜೊತೆ ಬನ್ನಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳು ಗೆಲುವು ದಾಖಲಿಸಲಿದೆ ಎಂದಿದ್ದಾರೆ.

ಠಾಕ್ರೆಯವರ ಆಹ್ವಾನವನ್ನು “ಅಪಕ್ವ ಮತ್ತು ಹಾಸ್ಯಾಸ್ಪದ” ಎಂದು ಬಣ್ಣಿಸಿರುವ ಗಡ್ಕರಿ, ಬಿಜೆಪಿಯು ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯನ್ನು ಹೊಂದಿದೆ. ಶಿವಸೇನೆ (ಯುಬಿಟಿ) ನಾಯಕರು ಕೇಸರಿ ಪಕ್ಷದ ನಾಯಕರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ. ಯವತ್ಮಲ್‌ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಠಾಕ್ರೆ, “ಬಿಜೆಪಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಮಾಜಿ ಕಾಂಗ್ರೆಸ್ ನಾಯಕ ಕೃಪಾ ಶಂಕರ್ ಸಿಂಗ್‌ ಕೂಡ ಪ್ರಧಾನಿ ಮೋದಿ ಜೊತೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಗಡ್ಕರಿ ಹೆಸರು ಪಟ್ಟಿಯಲ್ಲಿ ಇರಲಿಲ್ಲ” ಎಂದು ಕಾಳೆಲೆದಿದ್ದಾರೆ.

“ನಾನು ಎರಡು ದಿನಗಳ ಮುಂಚೆ ಬಿಜೆಪಿ ತೊರೆದು ನಮ್ಮ ಜೊತೆ ಸೇರುವಂತೆ ಗಡ್ಕರಿ ಅವರಿಗೆ ಹೇಳಿದ್ದೆ. ಈಗ ಅದನ್ನು ಪುನರುಚ್ಚರಿಸುತ್ತೇನೆ. ಬಿಜೆಪಿ ತೊರೆದು ನಮ್ಮ ಮಹಾ ವಿಕಾಸ ಅಘಾಡಿ ಮೈತ್ರಿಕೂಟಕ್ಕೆ ಸೇರಿ. ನಿಮ್ಮ ಗೆಲುವನ್ನು ನಾವು ಖಚಿತಪಡಿಸುತ್ತೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಗೆಲುವು ದಾಖಲಿಸಲಿದೆ ಮತ್ತು ಸರ್ಕಾರ ರಚಿಸಲಿದೆ” ಎಂದು ಠಾಕ್ರೆ ಹೇಳಿದ್ದಾರೆ.
ಠಾಕ್ರೆ ಆಹ್ವಾನದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ, ಶಿವಸೇನೆ (ಯುಬಿಟಿ) ನಾಯಕ ಬಿಜೆಪಿ ನಾಯಕರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾಗಿರುವ ನಿತಿನ್ ಗಡ್ಕರಿ ಹೆಸರು ಬಿಜೆಪಿ ಪ್ರಕಟಿಸಿದ 193 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಪೂರ್ಣಗೊಳ್ಳದ ಹಿನ್ನೆಲೆ, ಗಡ್ಕರಿ ಹೆಸರು ಮೊದಲ ಪಟ್ಟಿಯಲ್ಲಿ ಇರಲಿಲ್ಲ ಎನ್ನಲಾಗಿದೆ.

Previous Post
ಕಾಂಗ್ರೆಸ್‌ನಿಂದ ಬಡ ಮಹಿಳೆಗೆ 1 ಲಕ್ಷ ನೀಡುವ ‘ಮಹಾಲಕ್ಷ್ಮಿ’ ಸೇರಿ ಹಲವು ಗ್ಯಾರೆಂಟಿಗಳ ಘೋಷಣೆ
Next Post
ಬಿಜೆಪಿಯಿಂದ ಟಿಕೆಟ್ ಆಫರ್ ನೀಡಿತ್ತು, ತಿರಸ್ಕರಿಸಿದ್ದೆ”: ಇಡಿ ದಾಳಿ ಬಳಿಕ ಕಾಂಗ್ರೆಸ್ ಶಾಸಕಿ ಹೇಳಿಕೆ

Recent News