ಬಿಜೆಪಿಯಿಂದ ಟಿಕೆಟ್ ಆಫರ್ ನೀಡಿತ್ತು, ತಿರಸ್ಕರಿಸಿದ್ದೆ”: ಇಡಿ ದಾಳಿ ಬಳಿಕ ಕಾಂಗ್ರೆಸ್ ಶಾಸಕಿ ಹೇಳಿಕೆ

ಬಿಜೆಪಿಯಿಂದ ಟಿಕೆಟ್ ಆಫರ್ ನೀಡಿತ್ತು, ತಿರಸ್ಕರಿಸಿದ್ದೆ”: ಇಡಿ ದಾಳಿ ಬಳಿಕ ಕಾಂಗ್ರೆಸ್ ಶಾಸಕಿ ಹೇಳಿಕೆ

ರಾಂಚಿ, ಮಾ. 13: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜಾರ್ಖಂಡ್‌ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರ ಮನೆ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಬೆನ್ನಲ್ಲೇ, ನನಗೆ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಆಫರ್ ನೀಡಲಾಗಿತ್ತು ಎಂದು ಹೇಳಿದ್ದಾರೆ. ನಾನು ಬಿಜೆಪಿ ಸೇರಲು ನಿರಾಕರಿಸಿದ ಹಿನ್ನೆಲೆ ಮನೆ ಮೇಲೆ ಇಡಿ ದಾಳಿ ನಡೆದಿದೆ ಎಂದು ಶಾಸಕಿ ಅಂಬಾ ಪ್ರಸಾದ್ ಆರೋಪಿಸಿದ್ದಾರೆ.

“ನನಗೆ ಹಝಾರಿಬಾಗ್‌ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಬಿಜೆಪಿ ಹೇಳಿತ್ತು. ಆದರೆ, ನಾನು ಅದನ್ನು ತಿರಸ್ಕರಿಸಿದ್ದೆ. ಬಳಿಕ ಬಿಜೆಪಿಯ ಕೆಲ ಮುಖಂಡರು ಛತ್ರಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು. ನಾವು ಕಾಂಗ್ರೆಸ್ ಪಕ್ಷದಿಂದ ಬಂದವರು ಮತ್ತು ಬಾರ್ಕಗಾಂವ್ ಕ್ಷೇತ್ರವನ್ನು ಸತತವಾಗಿ ಗೆದ್ದಿದ್ದೇವೆ” ಎಂದು ಅಂಬಾ ಪ್ರಸಾದ್ ಹೇಳಿದ್ದಾರೆ.
“ಹಝಾರಿಬಾಗ್‌ನಲ್ಲಿ ನಮ್ಮ ಪಕ್ಷ ತುಂಬಾ ಬಲಿಷ್ಠವಾಗಿದೆ. ನಾನು ಗೆಲ್ಲುವ ಅಭ್ಯರ್ಥಿ ಎಂಬುದನ್ನು ಪಕ್ಷ ಮತ್ತು ಮಾಧ್ಯಮಗಳು ಹೇಳಿವೆ. ಆದ್ದರಿಂದ, ನಾನು ಟಿಕೆಟ್ ಆಫರ್ ನಿರಾಕರಿಸಿದ್ದಕ್ಕೆ ಇಡಿ ದಾಳಿ ನಡೆದಿದೆ. ದಿನವಿಡೀ ನಾನು ಚಿತ್ರಹಿಂಸೆಗೆ ಒಳಗಾಗಿದ್ದೇನೆ. ಇದು ಒಪ್ಪುವಂತದ್ದಲ್ಲ” ಎಂದು ಅಂಬಾ ಪ್ರಸಾದ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಶಾಸಕಿ ಅಂಬಾ ಪ್ರಸಾದ್ ಅವರ ರಾಂಚಿಯ ಅಧಿಕೃತ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ. ಹಝಾರಿಬಾಗ್ ಜಿಲ್ಲೆಯ ಬರ್ಕಗಾಂವ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಇಡಿ ತಿಳಿಸಿದೆ.

Previous Post
ಬಿಜೆಪಿಯಲ್ಲಿ ಅವಮಾನವಾದರೆ ನಮ್ಮ ಜೊತೆ ಸೇರಿ: ಗಡ್ಕರಿಗೆ ಉದ್ಧವ್ ಆಹ್ವಾನ
Next Post
ಮಾರ್ಚ್ 13 ರೊಳಗೆ Paytm FASTag ಬದಲಿಸಿ – ಬಳಕೆದಾರರಿಗೆ NHAI ಸಲಹೆ

Recent News