ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್‌, ಸುಖಬೀರ್‌ ಸಂಧು ಆಯ್ಕೆ

ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್‌, ಸುಖಬೀರ್‌ ಸಂಧು ಆಯ್ಕೆ

ನವದೆಹಲಿ, ಮಾ. 14: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಸಮಿತಿಯು ಜ್ಞಾನೇಶ್‌ ಕುಮಾರ್‌ ಮತ್ತು ಸುಖಬೀರ್‌ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಿದೆ. ಅರುಣ್‌ ಗೋಯಲ್‌ ಅವರ ರಾಜೀನಾಮೆ ಬಳಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ. ಭಾರತೀಯ ಚುನಾವಣಾ ಆಯೋಗದ ಉನ್ನತ ಸಮಿತಿಯಲ್ಲಿ ಖಾಲಿ ಇದ್ದ ಎರಡು ಹುದ್ದೆಗಳಿಗೆ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಇಂದು ಮಧ್ಯಾಹ್ನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗವು ತಯಾರಿ ನಡೆಸುತ್ತಿರುವಾಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಸಹಾಯ ಮಾಡಲು ಇಬ್ಬರು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಚೌಧರಿ ಭಾಗವಹಿಸಿದ್ದರು. ಪ್ರಧಾನಿ ಮತ್ತು ಚೌಧರಿ ಅವರಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಭಾರತದ ಮುಖ್ಯ ನ್ಯಾಯಾಧೀಶರ ಬದಲಿಗೆ ಕೇಂದ್ರ ಸಚಿವರನ್ನು ಆಯ್ಕೆ ಸಮಿತಿಯಲ್ಲಿ ನೇಮಿಸಿದ ಕಾನೂನಿನ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್‌ ಚೌಧರಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿ ಈ ಸಮಿತಿಯಲ್ಲಿ ಇರಬೇಕಿತ್ತು, ಕಳೆದ ವರ್ಷ ತಂದ ಕಾನೂನು ಸಭೆಯನ್ನು ಕೇವಲ ‘ಔಪಚಾರಿಕತೆ’ಗೆ ಇಳಿಸಿದೆ. ಪ್ಯಾನಲ್‌ನಲ್ಲಿ ಸರ್ಕಾರವು ಬಹುಮತದಲ್ಲಿದೆ, ಅವರು ಬಯಸಿದ್ದು ನಡೆಯುತ್ತದೆ ಎಂದು ಹೇಳಿದ್ದಾರೆ.

ನಿನ್ನೆ ರಾತ್ರಿ ಪರಿಶೀಲನೆಗೆ 212 ಹೆಸರುಗಳನ್ನು ನೀಡಲಾಗಿದೆ. ನಾನು ನಿನ್ನೆ ರಾತ್ರಿ ದೆಹಲಿಗೆ ತಲುಪಿದೆ ಮತ್ತು ಸಭೆ ಇಂದು ಮಧ್ಯಾಹ್ನವಾಗಿತ್ತು. ನನಗೆ 212 ಹೆಸರುಗಳನ್ನು ನೀಡಲಾಯಿತು, ಯಾರಾದರೂ ಒಂದು ದಿನದಲ್ಲಿ ಇಷ್ಟು ಅಭ್ಯರ್ಥಿಗಳನ್ನು ಹೇಗೆ ಪರೀಕ್ಷಿಸುತ್ತಾರೆ? ನಂತರ, ಸಭೆಯ ಮೊದಲು ನನಗೆ 6 ಶಾರ್ಟ್‌ಲಿಸ್ಟ್ ಹೆಸರುಗಳನ್ನು ನೀಡಲಾಯಿತು. ಬಹುಮತವು ಅವರ ಬಳಿ ಇದೆ, ಆದ್ದರಿಂದ ಅವರು ಬಯಸಿದ ಅಭ್ಯರ್ಥಿಗಳನ್ನು ಅವರು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಆಯ್ಕೆಯ ಕಾರ್ಯವಿಧಾನವನ್ನು ಪ್ರಶ್ನಿಸಿ ಭಿನ್ನಾಭಿಪ್ರಾಯ ಟಿಪ್ಪಣಿ ನೀಡಿರುವುದಾಗಿ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಫೆಬ್ರವರಿ 14ರಂದು ಚುನಾವಣಾ ಆಯುಕ್ತ ಸ್ಥಾನದಿಂದ ಪಾಂಡೆ ನಿವೃತ್ತರಾಗಿದ್ದರು. ಆದರೆ ಇದಾದ ಬಳಿಕ ಅರುಣ್‌ ಗೋಯಲ್‌ ಚುನಾವಣಾ ಆಯುಕ್ತರ ಸ್ಥಾನಕ್ಕೆ ದಿಡೀರ್‌ ರಾಜೀನಾಮೆ ನೀಡಿದ್ದರು. ಗೋಯೆಲ್ ಅವರ ಅನಿರೀಕ್ಷಿತ ರಾಜೀನಾಮೆ ಬಳಿಕ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ಆಯೋಗದ ಏಕೈಕ ಸದಸ್ಯರಾಗಿದ್ದರು. ಅರುಣ್‌ ಗೋಯಲ್‌ ದಿಡೀರ್‌ ರಾಜೀನಾಮೆ ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

Previous Post
ಇಂಟರ್ನೆಟ್‌ಗೆ ನಿರ್ಬಂಧ ವಿಧಿಸುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ
Next Post
ಜಡ್ಜ್‌ ನೇಮಕಾತಿಗೆ ಆಕ್ಷೇಪ: ಕೇಂದ್ರದ ದ್ವಿಮುಖ ನೀತಿ ಬಗ್ಗೆ ಸುಪ್ರೀಂ ಗರಂ

Recent News