ಇಂದು ಲೋಕಸಭಾ ಚುನಾವಣೆ ದಿನಾಂಕ ಘೋಷಣೆ

ಇಂದು ಲೋಕಸಭಾ ಚುನಾವಣೆ ದಿನಾಂಕ ಘೋಷಣೆ

ನವದೆಹಲಿ, ಮಾ. 15: ಕೇಂದ್ರ ಚುನಾವಣಾ ಆಯೋಗ ಶನಿವಾರ ಮಧ್ಯಾಹ್ನ 3 ಗಂಟೆಗೆ ಮಾಧ್ಯಮಗೋಷ್ಠಿ ಏರ್ಪಡಿಸಿದ್ದು, 2024ರ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಲಿದೆ. ಚುನಾವಣೆಯ ದಿನಾಂಕಗಳು ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಗೆ ಬರಲಿದೆ. ದೇಶದಲ್ಲಿ ಒಟ್ಟು ಏಳು ಅಥವಾ ಎಂಟು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದ್ದು, ಮೇ ತಿಂಗಳಿನಲ್ಲಿ ಫಲಿತಾಂಶ ಬರಲಿದೆ. ಹಾಲಿ ಲೋಕಸಭೆಯ ಅವಧಿ ಜೂನ್‌ 16ರಂದು ಅಂತ್ಯಗೊಳ್ಳಲಿದ್ದು, ಅದಕ್ಕೂ ಮುನ್ನ ಹೊಸ ಲೋಕಸಭೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶನಿವಾರ ವಿಜ್ಞಾನ ಭವನದಲ್ಲಿ ಮೂರೂ ಚುನಾವಣಾ ಆಯುಕ್ತರು ಪತ್ರಿಕಾಗೋಷ್ಠಿ ನಡೆಸಲಿದ್ದು, ಗೋಷ್ಠಿಯನ್ನು ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್‌ ಗಳಲ್ಲಿ ನೇರಪ್ರಸಾರ ಮಾಡಲಾಗುವುದು.

ಕಳೆದ ಬಾರಿ 2019ರಲ್ಲಿ ಮಾರ್ಚ್‌ 10ರಂದು ಚುನಾವಣೆ ದಿನಾಂಕಗಳನ್ನು ಘೋಷಣೆ ಮಾಡಲಾಗಿತ್ತು. ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆದು ಮೇ 23ರಂದು ಮತಗಳ ಎಣಿಕೆ ನಡೆದಿತ್ತು. ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರ ಪೈಕಿ ಎರಡು ಸ್ಥಾನ ಖಾಲಿ ಇದ್ದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಗ್ಯಾನೇಶ್‌ ಕುಮಾರ್‌ ಮತ್ತು ಸುಕ್ಬಿರ್‌ ಸಿಂಗ್‌ ಸಂಧು ಅವರನ್ನು ಇನ್ನಿಬ್ಬರು ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಚುನಾವಣಾ ಆಯುಕ್ತರಲ್ಲಿ ಒಬ್ಬರಾಗಿದ್ದ ಅನೂಪ್‌ ಚಂದ್ರ ಪಾಂಡೆ ಫೆ.14ರಂದು ಅಚ್ಚರಿಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಮತ್ತು ವಿರೋಧ ಪಕ್ಷಗಳು ಇತ್ತೀಚಿಗಷ್ಟೇ ರೂಪಿಸಿಕೊಂಡಿರುವ ಕಾಂಗ್ರೆಸ್‌ ನೇತೃತ್ವದ INDIA ಮೈತ್ರಿಕೂಟಗಳ ನಡುವೆ ಹಣಾಹಣಿ ನಡೆಯಲಿದೆ. 2024ರ ಸಾರ್ವತ್ರಿಕ ಚುನಾವಣೆ ಮತ್ತು ಕೆಲವು ರಾಜ್ಯ ವಿಧಾನಸಭೆಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗವು ಮಾರ್ಚ್ 16 ರಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದೆ. ಇದನ್ನು ಇಸಿಐನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಅಂತ ಇಸಿಐ (ECI) ತಿಳಿಸಿದೆ. 2019ರಲ್ಲಿ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಿತು. ಕಳೆದ ಬಾರಿ ಮಾರ್ಚ್ 10ರಂದು ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಿಸಿತ್ತು. ಏಪ್ರಿಲ್ 11 ರಂದು ಮೊದಲ ಹಂತದ ಮತದಾನ ನಡೆದಿದ್ದರೆ, ಮೇ 19 ರಂದು ಕೊನೆಯ ಹಂತದ ಮತದಾನ ನಡೆದಿತ್ತು. ಮೇ 23ರಂದು ಫಲಿತಾಂಶ ಹೊರಬಿದ್ದಿತ್ತು. ಆ ಚುನಾವಣೆಯ ಸಮಯದಲ್ಲಿ, ದೇಶದಲ್ಲಿ 91 ಕೋಟಿಗೂ ಹೆಚ್ಚು ಮತದಾರರಿದ್ದರು, ಅದರಲ್ಲಿ 67 ಪ್ರತಿಶತದಷ್ಟು ಜನರು ಮತ ಚಲಾಯಿಸಿದ್ದರು.

Previous Post
ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿ ಹಂಚಿಕೊಳ್ಳದ ಎಸ್‌ಬಿಐ: ಮತ್ತೆ ಸುಪ್ರೀಂ ತರಾಟೆ
Next Post
ಬಿಜೆಪಿ ಭ್ರಷ್ಟ ತಂತ್ರ ಬಹಿರಂಗಪಡಿಸಿದ ಚುನಾವಣಾ ಬಾಂಡ್: ಜೈರಾಮ್ ರಮೇಶ್

Recent News