ಚುನಾವಣಾ ಬಾಂಡ್ ಪ್ರಕರಣ ಅಸಮರ್ಪಕ ಮಾಹಿತಿ ನೀಡಿದ ಎಸ್‌ಬಿಐ ಮತ್ತೆ ಸುಪ್ರೀಂ ತರಾಟೆ

ಚುನಾವಣಾ ಬಾಂಡ್ ಪ್ರಕರಣ ಅಸಮರ್ಪಕ ಮಾಹಿತಿ ನೀಡಿದ ಎಸ್‌ಬಿಐ ಮತ್ತೆ ಸುಪ್ರೀಂ ತರಾಟೆ

ನವದೆಹಲಿ : ಕೇಂದ್ರ ಚುನಾವಣಾ ಆಯೋಗದೊಂದಿಗೆ ಚುನಾವಣಾ ಬಾಂಡ್‌ಗಳ ಅಸಮರ್ಪಕ ಮಾಹಿತಿ ಹಂಚಿಕೊಂಡ ಭಾರತೀಯ ಸ್ಟೇಟ್ ಬ್ಯಾಂಕ್ ( SBI ) ಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ‌. ಯಾರು ಯಾರಿಗೆ ಚುನಾವಣಾ ಬಾಂಡ್ ನೀಡಿದರು ಎನ್ನುವುದರ ಜೊತೆಗೆ ಯಾವ ದಿನಾಂಕದಂದು ನೀಡಿದರು ಮತ್ತು ಬಾಂಡ್‌ನ ಸಿರಿಯಲ್ ಸಂಖ್ಯೆ ಏನು ಎನ್ನುವುದನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ.

ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ, ಮಾರ್ಚ್ 11 ರ ನ್ಯಾಯಾಲಯದ ಆದೇಶವನ್ನು ಎಸ್‌ಬಿಐ ಸಂಪೂರ್ಣವಾಗಿ ಪಾಲಿಸಿಲ್ಲ,
ಚುನಾವಣಾ ಬಾಂಡ್‌ಗಳ ಖರೀದಿ ದಿನಾಂಕ, ಖರೀದಿದಾರರ ಹೆಸರು, ಮುಖಬೆಲೆ ಸೇರಿದಂತೆ ಎಲ್ಲಾ ವಿವರಗಳನ್ನು ನೀಡಲು ಸೂಚಿಸಿತ್ತು. ಆದರೆ ಎಸ್‌ಬಿಐ ಚುನಾವಣಾ ಬಾಂಡ್ ಸಂಖ್ಯೆಗಳನ್ನು (ಆಲ್ಫಾ ನ್ಯೂಮರಿಕ್ ಸಂಖ್ಯೆಗಳು) ಬಹಿರಂಗಪಡಿಸಿಲ್ಲ ಈ ಹಿನ್ನಲೆ ನಾವು ನೋಟಿಸ್‌ಗೆ ನಿರ್ದೇಶನ ನೀಡುತ್ತೇವೆ ಎಂದು ಹೇಳಿದೆ.

ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಎಸ್‌ಬಿಐ ತಮ್ಮ ಬಳಿ ಲಭ್ಯವಿರುವ ಎಲ್ಲಾ ವಿವರಗಳನ್ನು ಒದಗಿಸುವ ಅಗತ್ಯವಿರುವ ಅಂತರ್ಗತ ಆದೇಶವಾಗಿದೆ ಎಂದು ಉನ್ನತ ನ್ಯಾಯಾಲಯದ ತೀರ್ಪು ಗಮನಸೆಳೆದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಸ್‌ಬಿಐಗೆ ಪ್ರತಿಕ್ರಿಯೆ ನೀಡಲು ಸಮಯ ಕೋರಿದರು.

ಕಳೆದ ತಿಂಗಳು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು, ಏಪ್ರಿಲ್ 12, 2019 ರಿಂದ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಮಾರ್ಚ್ 6 ರೊಳಗೆ ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶಿಸಿತ್ತು‌. ಆದರೆ SBI ಗಡುವಿನ ವಿಸ್ತರಣೆಯನ್ನು ಕೋರಿ ಅರ್ಜಿ ಸಲ್ಲಿಸಿತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಎಸ್‌ಬಿಐ ಮಾಡಿದ ವಿನಂತಿಯನ್ನು ತಿರಸ್ಕರಿಸಿತು.

ಖರೀದಿದಾರರ ಹೆಸರು, ಚುನಾವಣಾ ಬಾಂಡ್‌ಗಳ ನಾಮನಿರ್ದೇಶನ, ನಗದೀಕರಣದ ದಿನಾಂಕ ಸೇರಿದಂತೆ ರಾಜಕೀಯ ಪಕ್ಷಗಳು ರಿಡೀಮ್ ಮಾಡಿದ ಪ್ರತಿ, ಚುನಾವಣಾ ಬಾಂಡ್‌ನ ವಿವರಗಳನ್ನು ಮಾರ್ಚ್ 12 ರೊಳಗೆ ನೀಡಬೇಕು ಎಂದು ಸೂಚಿಸಿತು. ಕೋರ್ಟ್ ಸೂಚನೆ ಹಿನ್ನಲೆ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು‌. ಸಲ್ಲಿಕೆಯಾದ ಮಾಹಿತಿ ಸದ್ಯ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದೆ‌.

Previous Post
ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರ್ಕಾರ ಸೋಲಿಸಲು ನಿರ್ಧರಿಸಿದೆ ಸಾಮಾಜಿಕ ಹೋರಾಟಗಾರ ಎಸ್‌.ಆರ್ ಹೀರೆಮಠ ಹೇಳಿಕೆ
Next Post
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲ್ಗುಣದಿಂದಾಗಿ ರಾಜ್ಯದಲ್ಲಿ ಬರಗಾಲ, ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಹಣವಿಲ್ಲ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ

Recent News