ಸಿಎಂ ಅರವಿಂದ್ ಕೇಜ್ರಿವಾಲ್ ಒಂಭತ್ತನೇ ಬಾರಿ ಇಡಿ ಸಮನ್ಸ್

ಸಿಎಂ ಅರವಿಂದ್ ಕೇಜ್ರಿವಾಲ್ ಒಂಭತ್ತನೇ ಬಾರಿ ಇಡಿ ಸಮನ್ಸ್

ನವದೆಹಲಿ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಭಾನುವಾರ ಒಂಬತ್ತನೇ ಸಮನ್ಸ್ ಅನ್ನು ಜಾರಿಗೊಳಿಸಿದ್ದು, ಮಾರ್ಚ್ 21ರ ಒಳಗಾಗಿ ವಿಚಾರಣೆಗೆ ಹಾಜರಾಗಲು ತಿಳಿಸಿದೆ.

ಹಲವು ಸಮನ್ಸ್‌ಗಳ ಬಳಿಕ ವಿಚಾರಣೆಗೆ ಕೇಜ್ರಿವಾಲ್ ಹಾಜರಾಗದ ಕಾರಣ ಜಾರಿ ನಿರ್ದೇಶನಾಲಯ ಎರಡು ದೂರುಗಳನ್ನು ನೀಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ 15,000 ರೂಪಾಯಿ ಮೌಲ್ಯದ ಶ್ಯೂರಿಟಿ ಬಾಂಡ್ ಮತ್ತು 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಶನಿವಾರ ಜಾಮೀನು ಮಂಜೂರು ಮಾಡಿದೆ. ಇದಾದ ಒಂದು ದಿನದ ಬಳಿಕ ಕೇಜ್ರಿವಾಲ್‌ಗೆ 9ನೇ ಸಮನ್ಸ್ ಅನ್ನು ಇ.ಡಿ ನೀಡಿದೆ.

ಶನಿವಾರ ಇ.ಡಿ ದೂರಿನ ವಿಚಾರಣೆಗಾಗಿ ರೋಸ್ ಅವೆನ್ಯೂ ಕೋರ್ಟ್‌ಗೆ ಸ್ವತಃ ಸಿಎಂ ಅರವಿಂದ್ ಕೇಜ್ರಿವಾಲ್ ಹಾಜರಾಗಿದ್ದು, ಜಾಮೀನು ಮಂಜೂರಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಲಾಗಿದೆ.

ಈ ವೇಳೆ ಸಿಎಂ ಕೇಜ್ರಿವಾಲ್ ಪರ ವಕೀಲ ರಮೇಶ್ ಗುಪ್ತಾ ವಾದಿಸಿದ್ದು, ಕೇಜ್ರಿವಾಲ್‌ಗೆ ಜಾಮೀನು ನೀಡಬೇಕು ಮತ್ತು ವಿಚಾರಣೆ ಮುಂದುವರಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಇ.ಡಿ. ಯಾವುದೇ ಅಭ್ಯಂತರವಿಲ್ಲ ಎಂದಿದ್ದು, ಕೋರ್ಟ್ ಜಾಮೀನು ನೀಡಿದೆ. ಹಾಗೆಯೇ ಕೇಜ್ರಿವಾಲ್‌ಗೆ ಸಂಬಂಧಿಸಿದ ದೂರುಗಳ ದಾಖಲೆಯನ್ನು ನೀಡಲು ಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಿದೆ.

ಈ ಹಿಂದೆ ಕೇಜ್ರಿವಾಲ್ ಸಮನ್ಸ್‌ಗಳನ್ನು ‘ಕಾನೂನುಬಾಹಿರ’ ಎಂದು ಕರೆದಿದ್ದು ಯಾವುದೇ ವಿಚಾರಣೆಗೆ ಹಾಜರಾಗಿರಲಿಲ್ಲ. ಎಂಟು ಸಮನ್ಸ್‌ಗಳನ್ನು ನೀಡಿದರೂ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಇ.ಡಿ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯಕ್ಕೆ ಎರಡು ದೂರುಗಳನ್ನು ನೀಡಿದೆ. ಈ ದೂರಿನ ವಿಚಾರಣೆಯಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡಲಾಗಿದೆ. ಇನ್ನು ಇದೇ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಹೈದರಾಬಾದ್‌ನಲ್ಲಿ ಬಂಧಿಸಿದೆ.

Previous Post
ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂದಲ್ಲಿ ಮತ ಎಣಿಕೆ ದಿನಾಂಕ‌ ಬದಲು
Next Post
ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ

Recent News