ಕೇಜ್ರಿವಾಲ್‌ಗೆ ಕಸ್ಟಡಿಯಲ್ಲಿ ಕಿರುಕುಳ: ಪತ್ನಿ ಆರೋಪ

ಕೇಜ್ರಿವಾಲ್‌ಗೆ ಕಸ್ಟಡಿಯಲ್ಲಿ ಕಿರುಕುಳ: ಪತ್ನಿ ಆರೋಪ

ನವದೆಹಲಿ, ಮಾ. 28: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿ ಸಾಕಷ್ಟು ಕಿರುಕುಳವನ್ನು ನೀಡಲಾಗುತ್ತಿದೆ ಎಂದು ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಆರೋಪಿಸಿದ್ದಾರೆ. ಪತಿಯ ನ್ಯಾಯಾಲಯದ ವಿಚಾರಣೆ ಹಿನ್ನೆಲೆ ಕೋರ್ಟ್‌ಗೆ ಬಂದಿದ್ದ ಸುನೀತಾ ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅವರಿಗೆ ಆರೋಗ್ಯ ಸರಿಯಿಲ್ಲ, ಅವರ ಶುಗರ್ ಲೆವೆಲ್‌ನಲ್ಲಿ ಏರುಪೇರಾಗುತ್ತಿದೆ, ಅವರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ, ಈ ದೌರ್ಜನ್ಯ ಹೆಚ್ಚು ಕಾಲ ಮುಂದುವರಿಯುವುದಿಲ್ಲ ಮತ್ತು ಜನರು ಇದಕ್ಕೆ ತಕ್ಕದಾಗಿ ಉತ್ತರಿಸುತ್ತಾರೆ ಎಂದು ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಮೊದಲು ಮಾ. 28ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿತ್ತು. ಇಂದು ಮತ್ತೆ ಏ.1ರವರೆಗೆ ಕೇಜ್ರಿವಾಲ್‌ಗೆ ಇಡಿ ಕಸ್ಟಡಿಯನ್ನು ಮುಂದುವರಿಸಲಾಗಿದೆ. ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಇಡಿ ಆರೋಪ ಸುಳ್ಳು ಎಂದು ವಾದಿಸಿದ್ದಾರೆ. ಜಾರಿ ನಿರ್ದೇಶನಾಲಯ, ತನ್ನ ಪಕ್ಷವನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ. ಯಾವುದೇ ನ್ಯಾಯಾಲಯವು ನನ್ನನ್ನು ಅಪರಾಧಿ ಎಂದು ಸಾಬೀತುಪಡಿಸಿಲ್ಲ. ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲು ಇಡಿ ನೀಡಿರುವ ಕಾರಣ ಕ್ಷುಲ್ಲಕ ಎಂದು ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಎಂ ಹುದ್ದೆಯಿಂದ ಪದಚ್ಯುತಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಈ ಕುರಿತ ಅರ್ಜಿಯನ್ನು ತಳ್ಳಿಹಾಕಿದ ದೆಹಲಿ ನ್ಯಾಯಾಲಯ, ಈ ವಿಚಾರದಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದೆ.

ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾರೆ. ಅದು ರಾಷ್ಟ್ರಪತಿಗಳ ಬಳಿಗೆ ಹೋಗಲಿದೆ. ಲೆಫ್ಟಿನೆಂಟ್ ಗವರ್ನರ್ ಈ ಬಗ್ಗೆ ಪರಿಗಣಿಸಬೇಕು, ರಾಷ್ಟ್ರಪತಿಗಳು ಪರಿಗಣಿಸಬೇಕು. ನಾವು ಈ ವಿಚಾರದಲ್ಲಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

Previous Post
ಏ. 1ರವರೆಗೆ ಕೇಜ್ರಿವಾಲ್ ಇಡಿ ಕಸ್ಟಡಿಗೆ
Next Post
ಸಿಜೆಐಗೆ 600ಕ್ಕೂ ಹೆಚ್ಚು ವಕೀಲರ ತಂಡದಿಂದ ಪತ್ರ

Recent News