ಮಾ.30ರಂದು ಕಾರ್ಯಕರ್ತರ ಜತೆ ಸುಮಲತಾ ಮಹತ್ವದ ಸಭೆ: ಕುತೂಹಲಗಳಿಗೆ ಅಂದು ತೆರೆ?

ಮಾ.30ರಂದು ಕಾರ್ಯಕರ್ತರ ಜತೆ ಸುಮಲತಾ ಮಹತ್ವದ ಸಭೆ: ಕುತೂಹಲಗಳಿಗೆ ಅಂದು ತೆರೆ?

ಬೆಂಗಳೂರು, ಮಾರ್ಚ್ 28: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪರಿಣಾಮ ಜೆಡಿಎಸ್ ಪಾಲಾದ ಮಂಡ್ಯ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಇದೇ ಮಾರ್ಚ್ 30 ಬೆಂಗಳೂರು ನಿವಾಸದಲ್ಲಿ ಮತ್ತೆ ಸಭೆ ನಡೆಸಲಿದ್ದಾರೆ. ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ತಮಗೇ ಬಿಜೆಪಿ ಟಿಕೆಟ್ ಕೊಡಲಿದೆ ಎಂದು ಭಾವಿಸಿದ್ದರು. ಆದರೆ ಆಸೆ ನಿರಾಸೆಯಾದ ಕಾರಣ ಅವರು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸದೇ ಮೌನವಾಗಿಯೇ ಉಳಿದರು.

ಈ ಸಂಬಂಧ ನಿರ್ಧಾರ ಕೈಗೊಳ್ಳಲು ಅವರು ಬೆಂಗಳೂರು ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಆಪ್ತರು, ಕಾರ್ಯತರ ಅಭಿಪ್ರಾಯ ಸಂಗ್ರಹಿಸಿ, ಅದರ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಅಂದಿನ ಸಭೆ ಬಳಿಕ ಮುಂದಿನ ರಾಜಕೀಯ ನಡೆ ಬಹಿರಂಗೊಳಿಸುವ ನಿರೀಕ್ಷೆಗಳು ಇವೆ.

ಈ ಸಭೆಯಲ್ಲಿ ಮಂಡ್ಯದಿಂದ ಪಕ್ಷೇತರವಾಗಿ ನಿಲ್ಲಬೇಕಾ? ನಿಂತರ ಅದರ ಸಾಧಕ, ಬಾಧಕಗಳು, ಗೆಲವು-ಸೋಲಿನ ಲೆಕ್ಕಾಚಾರಗಳು ಹಾಗೂ ಪಕ್ಷೇತರವಾಗಿ ಸ್ಪರ್ಧೆ ಮಾಡದೇ ಬಿಜೆಪಿ ವರಿಷ್ಠತರ ಸೂಚನೆಯಂತೆ ಸ್ವಕ್ಷೇತ್ರ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬಂಬಲ ಸೂಚಿಸಬೇಕಾ? ಎಂಬ ಹಲವು ವಿಚಾರಗಳನ್ನು ಅವರು ಚರ್ಚೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಅವರು ಮಂಡ್ಯದಲ್ಲಿ ಕಾರ್ಯಕರ್ತರ ತುರ್ತು ಸಭೆ ಕರೆದಿದ್ದರು. ಆವತ್ತೆ ಅವರು ತನ್ನ ನಿಲುವು ಪ್ರಕಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಸುಮಲತಾ ಅಂಬರೀಶ್ ನಡೆ ಈ ತಿಂಗಳಾಂತ್ಯಕ್ಕೆ ತಿಳಿಯಲಿದೆ. ಅವರ ಮುಂದಿನ ರಾಜಕೀಯ ನಡೆ, ನಿರ್ಧಾರ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.

ಸುಮಲತಾ ನಡೆ ಬಗ್ಗೆ ಯಾಕಿಷ್ಟು ಕುತೂಹಲ? 2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಚುನಾವಣೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕಾರಣ ಇಲ್ಲಿ ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಪರೋಕ್ಷವಾಗಿ ಬೆಂಬಲ ನೀಡಿತ್ತು. ಜೆಡಿಎಸ್ ನಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಸ್ಪರ್ಧಿಸಿ ಸೋಲು ಅನುಭವಿಸಿದರು. ಪ್ರಚಾರ ತುಂಬೆಲ್ಲ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿಗೆ ಪರ ಪ್ರಚಾರದಲ್ಲಿ ತೊಡಗಿದ್ದರು. ಪಕ್ಷೇತರ ಸ್ಪರ್ಧಿಯ ಪರ ಮೂರು ರಾಜಕೀಯ ಪಕ್ಷಗಳ ಭಾವುಟ ರಾರಾಜಿಸಿದ್ದವು. ಆದರೆ ಈ ಬಾರಿ ಮಂಡ್ಯ ರಾಜಕಾರಣ ಬದಲಾಗಿದೆ. ಬಿಜೆಪಿಯಿಂದ ಗೌರವ, ಸ್ಥಾನಮಾನ ಭರವಸೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್‌ಗೆ ಮಂಡ್ಯ ಗೆಲ್ಲುವುದು ಪ್ರತಿಷ್ಠೆಯಾಗಿದೆ. ಇದರ ವಿರುದ್ಧ ಸುಮಲತಾ ಮತ್ತೆ ಕಣಕ್ಕಿಳಿದರೆ ಬಿಜೆಪಿ ಬೆಂಬಲ ದೊರೆಯುವುದು ಬಹುತೇಕ ಅನುಮಾನ. ಹೀಗಾಗಿ ಅವರಿಗೆ ಈ ಭಾರಿ ಸ್ಪರ್ಧೆ ಬೇಡ, ಕ್ಷೇತ್ರ ಬಿಟ್ಟುಕೊಡಿ, ಭವಿಷ್ಯದಲ್ಲಿ ತಮಗೆ ಉತ್ತಮ ಸ್ಥಾನ ಮಾನ ನೀಡುವುದು ಎಂದು ಬಿಜೆಪಿ ವರಿಷ್ಠರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸುಮಲತಾ ಅವರು ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಅವರ ಮುಂದಿನ ರಾಜಕೀಯ ನಡೆ, ನೀರ್ಧಾರಗಳು ಕೌತುಕ ಸೃಷ್ಟಿಸುವಂತೆ ಮಾಡಿವೆ.

Previous Post
ಇಂದಿನಿಂದ 12 ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭ
Next Post
ನಮ್ಮ ಚುನಾವಣಾ ಕಾರ್ಯತಂತ್ರ ತಿಳಿಯಲು ಫೋನ್ ಹುಡುಕುತ್ತಿರುವ ಇಡಿ: ಆತಿಶಿ

Recent News