ಸ್ವಾಭಿಮಾನಿ ಮಹಿಳೆಯರು ಸಮಾಜದ ಶಕ್ತಿಯಾಗುತ್ತಾರೆ, ಭಾರತದ ಭವಿಷ್ಯ ಬದಲಿಸುತ್ತಾರೆ: ರಾಹುಲ್ ಗಾಂಧಿ
ನವದೆಹಲಿ, ಮಾ. 29: ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶೇ. 50ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು, ಸ್ವಾಭಿಮಾನಿ ಮಹಿಳೆಯರು ಸಮಾಜದ ಶಕ್ತಿಯಾಗುತ್ತಾರೆ; ಅವರು ಭಾರತದ ಭವಿಷ್ಯವನ್ನು ಬದಲಿಸುತ್ತಾರೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಭರವಸೆ ನೀಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದಲ್ಲಿ ಮಹಿಳೆಯರ ಜನಸಂಖ್ಯೆ ಶೇಕಡಾ 50 ಅಲ್ಲವೇ? ಹೈಯರ್ ಸೆಕೆಂಡರಿ ಮತ್ತು ಹೈಯರ್ ಎಜುಕೇಷನ್ ನಲ್ಲಿ ಮಹಿಳೆಯರ ಉಪಸ್ಥಿತಿ ಶೇಕಡ 50 ಅಲ್ಲವೇ? ಹಾಗಿದ್ದಲ್ಲಿ, ವ್ಯವಸ್ಥೆಯಲ್ಲಿ ಅವರ ಪಾಲು ಏಕೆ ಕಡಿಮೆಯಾಗಿದೆ. ‘ಆಧಿ ಅಬಾದಿ ಪೂರಾ ಹಕ್’, ದೇಶವನ್ನು ನಡೆಸುವ ಸರ್ಕಾರದಲ್ಲಿ ಮಹಿಳೆಯರಿಗೆ ಸಮಾನ ಕೊಡುಗೆ ನೀಡಿದಾಗ ಮಾತ್ರ ಮಹಿಳೆಯರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ; ಕಾಂಗ್ರೆಸ್ ಅದನ್ನೇ ಬಯಸುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
‘ಎಲ್ಲಾ ಸರ್ಕಾರಿ ಉದ್ಯೋಗಗಳಿಗೆ ಅರ್ಧದಷ್ಟು ನೇಮಕಾತಿಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಕಾಂಗ್ರೆಸ್ ನಿರ್ಧರಿಸಿದೆ. ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯ ತಕ್ಷಣದ ಅನುಷ್ಠಾನದ ಪರವಾಗಿ ನಾವು ಕೂಡ ಇದ್ದೇವೆ’ ಎಂದು ಅವರು ಹೇಳಿದ್ದಾರೆ. ಸುರಕ್ಷಿತ ಆದಾಯ, ಭವಿಷ್ಯ, ಸ್ಥಿರತೆ ಮತ್ತು ಸ್ವಾಭಿಮಾನ ಹೊಂದಿರುವ ಮಹಿಳೆಯರು ನಿಜವಾಗಿಯೂ ಸಮಾಜದ ಶಕ್ತಿಯಾಗುತ್ತಾರೆ. ಶೇ.50 ರಷ್ಟು ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರು ಇರುವುದು ದೇಶದ ಪ್ರತಿಯೊಬ್ಬ ಮಹಿಳೆಗೆ ಬಲವನ್ನು ನೀಡುತ್ತದೆ ಮತ್ತು ಶಕ್ತಿಯುತ ಮಹಿಳೆಯರು ಭಾರತದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ಅವರು ಹೇಳಿದರು.
ಈ ಹಿಂದೆ, ಸಾರ್ವತ್ರಿಕ ಚುನಾವಣೆಗೆ ಮುನ್ನ ಕಾಂಗ್ರೆಸ್ ಮಹಿಳೆಯರಿಗೆ ಐದು ಭರವಸೆಗಳನ್ನು ಘೋಷಿಸಿತ್ತು. ಪಕ್ಷದ “ಮಹಾಲಕ್ಷ್ಮಿ” ಖಾತ್ರಿಯಡಿ, ಪ್ರತಿ ಬಡ ಕುಟುಂಬದಿಂದ ಒಬ್ಬ ಮಹಿಳೆಗೆ ನೇರ ನಗದು ವರ್ಗಾವಣೆಯ ಮೂಲಕ ವಾರ್ಷಿಕ ₹1 ಲಕ್ಷ ಸಹಾಯವನ್ನು ನೀಡಲಾಗುತ್ತದೆ. ಇದಲ್ಲದೆ, ಕಾಂಗ್ರೆಸ್ “ಆಧಿ ಆಬಾದಿ, ಪೂರಾ ಹಕ್” ಅನ್ನು ಖಚಿತಪಡಿಸುತ್ತದೆ. ಅದರ ಅಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಲ್ಲಿ ಶೇ.50 ಪ್ರತಿಶತವನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.
“ಶಕ್ತಿ ಕಾ ಸಮ್ಮಾನ್” ಖಾತರಿ ಅಡಿಯಲ್ಲಿ, ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನಕ್ಕೆ ಕೇಂದ್ರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
“ಅಧಿಕಾರ ಮೈತ್ರಿ” ಗ್ಯಾರಂಟಿ ಅಡಿಯಲ್ಲಿ, ಮಹಿಳೆಯರಿಗೆ ತಮ್ಮ ಕಾನೂನು ಹಕ್ಕುಗಳ ಬಗ್ಗೆ ಶಿಕ್ಷಣ ನೀಡಲು ಮತ್ತು ಅವರ ಜಾರಿಯಲ್ಲಿ ಅವರಿಗೆ ಸಹಾಯ ಮಾಡಲು ಪ್ಯಾರಾ-ಲೀಗಲ್ ಕಾರ್ಯಕಾರಿಯಾಗಿ ಸೇವೆ ಸಲ್ಲಿಸಲು ಕಾಂಗ್ರೆಸ್ ಪ್ರತಿ ಪಂಚಾಯತ್ನಲ್ಲಿ “ಅಧಿಕಾರ ಮೈತ್ರಿ” ಯನ್ನು ನೇಮಿಸುತ್ತದೆ. “ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್ಗಳು” ಖಾತರಿಯಡಿಯಲ್ಲಿ, ಕಾಂಗ್ರೆಸ್ ನೇತೃತ್ವದ ಕೇಂದ್ರವು ದೇಶದಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದರಂತೆ ಹಾಸ್ಟೆಲ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ.