ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮೇಲಿವೆ 242 ಕೇಸ್

ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮೇಲಿವೆ 242 ಕೇಸ್

ತಿರುವನಂತಪುರ, ಮಾ. 30: ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ (ಎನ್‌ಡಿಎ) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ 242 ಕ್ರಿಮಿನಲ್ ಪ್ರಕರಣಗಳಿವೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಚುನಾವಣೆ ಹಿನ್ನೆಲೆ ತನ್ನ ವಿರುದ್ಧ ಇರುವ ಪ್ರಕರಣಗಳ ಮಾಹಿತಿಯನ್ನು ಸುರೇಂದ್ರನ್ ಪಕ್ಷದ ಮುಖವಾಣಿಯ ಮೂರು ಪುಟಗಳಲ್ಲಿ ಪ್ರಕಟಿಸಿದ್ದಾರೆ. ಎರ್ನಾಕುಲಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಎಸ್‌ ರಾಧಾಕೃಷ್ಣನ್ ವಿರುದ್ಧ ಸುಮಾರು 211 ಪ್ರಕರಣಗಳಿವೆ. ಹೆಚ್ಚಿನ ಪ್ರಕರಣಗಳು 2018ರಲ್ಲಿ ನಡೆದ ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿವೆ ಮತ್ತು ನ್ಯಾಯಾಲಯದಲ್ಲಿವೆ. “ಪಕ್ಷದ ಮುಖಂಡರು ಮುಷ್ಕರ ಅಥವಾ ಪ್ರತಿಭಟನೆಗೆ ಕರೆ ನೀಡಿದಾಗ ಪೊಲೀಸರು ಅದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುತ್ತಾರೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ಪಿಟಿಐಗೆ ತಿಳಿಸಿದ್ದಾರೆ. ಸುರೇಂದ್ರನ್ ವಿರುದ್ದ ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದಂತೆ 237 ಪ್ರಕರಣಗಳು ಮತ್ತು ಕೇರಳದಲ್ಲಿ ವಿವಿಧ ಆಂದೋಲನಗಳಿಗೆ ಸಂಬಂಧಿಸಿದಂತೆ ಐದು ಪ್ರಕರಣಗಳು ದಾಖಲಾಗಿವೆ ಎಂದು ಜಾರ್ಜ್ ಕುರಿಯನ್ ಹೇಳಿದ್ದಾರೆ.

ಸುರೇಂದ್ರನ್, ರಾಧಾಕೃಷ್ಣನ್, ಅಲಪ್ಪುಝ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ಮತ್ತು ವಡಗರ ಕ್ಷೇತ್ರದ ಅಭ್ಯರ್ಥಿ ಪ್ರಫುಲ್ ಕೃಷ್ಣ ಅವರ ವಿರುದ್ಧದ ಪ್ರಕರಣಗಳ ಮಾಹಿತಿಯನ್ನು ಶುಕ್ರವಾರ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, “ಭಾರತದ ಕೆಲವು ಭಾಗಗಳಲ್ಲಿ ರಾಷ್ಟ್ರೀಯವಾದಿಯಾಗುವುದು ಕಷ್ಟ” ಎಂದು ಹೇಳಿದ್ದಾರೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪ್ರಸಿದ್ದ ಶಬಮರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಆದೇಶವನ್ನು 2018ರಲ್ಲಿ ಕೇರಳ ಸರ್ಕಾರ ಜಾರಿಗೊಳಿಸಲು ಮುಂದಾದಾಗ, ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಿದ್ದವು. ಕೇರಳದಲ್ಲಿ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 5 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಿಂಪಡೆಯಲು ಏಪ್ರಿಲ್ 8 ಕೊನೆಯ ದಿನಾಂಕವಾಗಿದೆ. ಮಾರ್ಚ್‌ 29ರವರೆಗೆ ಚುನಾವಣಾ ಆಯೋಗಕ್ಕೆ 18 ನಾಮಪತ್ರಗಳನ್ನು ಸ್ವೀಕರಿಸಿವೆ. ಕೊಲ್ಲಂನಿಂದ ಎಡ ಅಭ್ಯರ್ಥಿ ಎಂ ಮುಖೇಶ್ ಮತ್ತು ಕಾಸರಗೋಡಿನಿಂದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂಎಲ್ ನಾಮಪತ್ರ ಸಲ್ಲಿಸಿದ ಪ್ರಮುಖರಾಗಿದ್ದಾರೆ.

Previous Post
ಅಬಕಾರಿ ನೀತಿ ಹಗರಣ: ದೆಹಲಿಯ ಮತ್ತೋರ್ವ ಸಚಿವರಿಗೆ ED ಸಮನ್ಸ್
Next Post
ರೈತ ಹೋರಾಟಗಾರ ನವದೀಪ್ ಸಿಂಗ್ ಜಲ್ಬೇರಾ ಬಂಧನ

Recent News