ಅಬಕಾರಿ ನೀತಿ ಹಗರಣ ಸಾಕ್ಷಿಗೆ ಬಿಜೆಪಿ ಲಿಂಕ್‌ ಇರುವ ಬಗ್ಗೆ ತನಿಖೆ ನಡೆಸಿ: ಎಎಪಿ

ಅಬಕಾರಿ ನೀತಿ ಹಗರಣ ಸಾಕ್ಷಿಗೆ ಬಿಜೆಪಿ ಲಿಂಕ್‌ ಇರುವ ಬಗ್ಗೆ ತನಿಖೆ ನಡೆಸಿ: ಎಎಪಿ

ನವದೆಹಲಿ, ಮಾ. 30: ದೆಹಲಿ ಮದ್ಯ ನೀತಿ ಪ್ರಕರಣದ ಸಾಕ್ಷಿಗಳಲ್ಲಿ ಓರ್ವರಿಗೆ ಮತ್ತು ಬಿಜೆಪಿ ನಡುವೆ ಲಿಂಕ್‌ ಇದೆ ಎಂದು ಎಎಪಿ ಗಂಭೀರವಾದ ಆರೋಪವನ್ನು ಮಾಡಿದ್ದು, ಈ ಕುರಿತು ತನಿಖೆಯನ್ನು ಪ್ರಾರಂಭಿಸಲು ಜಾರಿ ನಿರ್ದೇಶನಾಲಯಕ್ಕೆ ಸವಾಲು ಹಾಕಿದೆ.
ಎಎಪಿ ಹಿರಿಯ ನಾಯಕರು ಮತ್ತು ದೆಹಲಿ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ಈ ಕುರಿತು ಜಂಟಿ ಪತ್ರಿಕಾಗೋಷ್ಟಿಯನ್ನು ನಡೆಸಿದ್ದು, ಮದ್ಯ ನೀತಿ ಪ್ರಕರಣದಲ್ಲಿ ‘ಇಡಿ’ಯಿಂದ ಬಂಧನಕ್ಕೊಳಗಾಗಿರುವ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ ಮಾಗುಂಟ ರೆಡ್ಡಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿತ್ರ ಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ ಎಂದು ಹೇಳಿದ್ದಾರೆ. ಇಡಿ ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದರೆ, ಈ ಕುರಿತು ದಾಖಲೆಯನ್ನು ತರಲು ತನಿಖೆಯನ್ನು ನಡೆಸುವಂತೆ ನಾವು ಜಾರಿ ನಿರ್ದೇಶನಾಲಯಕ್ಕೆ ಚಾಲೆಂಜ್‌ ಮಾಡುತ್ತೇವೆ. ಬಿಜೆಪಿಗೆ ಮದ್ಯದ ವ್ಯಾಪಾರಿಗಳ ಜೊತೆ ಸಂಪರ್ಕವಿತ್ತು ಎಂದು ಅತಿಶಿ ಆರೋಪಿಸಿದ್ದಾರೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾಗುಂಟಸ್ ಅವರ ಹೇಳಿಕೆ ಸೇರಿದಂತೆ ನಾಲ್ಕು ಹೇಳಿಕೆಗಳ ಆಧಾರದ ಮೇಲೆ ಬಂಧಿಸಲಾಗಿದೆ ಎಎಪಿ ನಾಯಕರು ಪ್ರತಿಪಾದಿಸಿದ್ದಾರೆ. ಮಾರ್ಚ್ 21ರಂದು, ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಅವರು ಪ್ರಸ್ತುತ ಏಪ್ರಿಲ್ 1ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ.

ಈ ಹಿಂದೆ, ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ವಿರುದ್ಧದ ಇನ್ನೊಬ್ಬ ಸಾಕ್ಷಿ ಶರತ್ ರೆಡ್ಡಿ ಅವರು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 55 ಕೋಟಿ ರೂಪಾಯಿಗಳನ್ನು ಪಾವತಿಸಿದ್ದರು, ಇದು ಪಕ್ಷವು ‘ಸೌತ್‌ ಲಾಬಿ’ ಯೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಸಾಬೀತುಪಡಿಸುತ್ತದೆ ಎಂದು ಅತಿಶಿ ಆರೋಪಿಸಿದ್ದರು. ಕೇಜ್ರಿವಾಲ್ ವಿರುದ್ಧ ಹೇಳಿಕೆಗಳನ್ನು ನೀಡುವವರೆಗೂ ಇಡಿ ಸಾಕ್ಷಿಗಳಿಗೆ ಚಿತ್ರಹಿಂಸೆ ನೀಡಿದೆ ಎಂದು ಅವರು ಆರೋಪಿಸಿದ್ದರು.
ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರಿಗೆ ಇಡಿ ಸಮನ್ಸ್‌ ನೀಡಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅತಿಶಿ, ಹೆಚ್ಚಿನ ಎಎಪಿ ನಾಯಕರಿಗೆ ಕೂಡ ಇಡಿ ಸಮನ್ಸ್‌ ನೀಡಬಹುದು ಮತ್ತು ನಾವು ಜೈಲಿಗೆ ಹೋಗಲು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಅವರು ನನ್ನನ್ನು, ಭಾರದ್ವಾಜ್ ಮತ್ತು ಇತರ ಎಎಪಿ ನಾಯಕರನ್ನು ಕರೆಸಿ ನಮ್ಮನ್ನು ಬಂಧಿಸಬಹುದು, ಆದರೆ ನಾವು ಜೈಲಿಗೆ ಹೋಗುವ ಬಗ್ಗೆ ಭಯ ಪಡುವುದಿಲ್ಲ ಎಂದು ಹೇಳಿದ್ದಾರೆ. ಕೇಜ್ರಿವಾಲ್ ಅವರ ಬಂಧನವು ದೇಶದಲ್ಲಿ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣವಾಗಿದೆ. ಇಂಡಿಯಾ ಮೈತ್ರಿ ಇದನ್ನು ವಿರೋಧಿಸಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಮಾರ್ಚ್ 31ರಂದು ಕೇಜ್ರಿವಾಲ್ ಅವರ ಬಂಧನದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ಇಂಡಿಯಾ ಬ್ಲಾಕ್ ನಾಯಕರು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಮಹಾ ರ್ಯಾಲಿ’ ನಡೆಸಲಿದ್ದಾರೆ. ಎಎಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ನಾಯಕರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

Previous Post
ರೈತ ಹೋರಾಟಗಾರ ನವದೀಪ್ ಸಿಂಗ್ ಜಲ್ಬೇರಾ ಬಂಧನ
Next Post
ನನ್ನದು ಗರ್ವ ಅಲ್ಲ, ಕನ್ನಡಿಗನ ಸಹಜ ಸ್ವಾಭಿಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News