IT ನೋಟಿಸ್: ಕಾಂಗ್ರೆಸಿಗೆ ಸುಪ್ರೀಂನಿಂದ ಬಿಗ್ ರಿಲೀಫ್

IT ನೋಟಿಸ್: ಕಾಂಗ್ರೆಸಿಗೆ ಸುಪ್ರೀಂನಿಂದ ಬಿಗ್ ರಿಲೀಫ್

ನವದೆಹಲಿ, ಏ. 1: ತೆರಿಗೆ ಮತ್ತು ದಂಡದ ರೂಪವಾಗಿ 3,500 ಕೋಟಿ ರುಪಾಯಿ ಪಾವತಿಸುವಂತೆ ನೋಟಿಸ್ ನೀಡಿದ್ದ ಆದಾಯ ತೆರಿಗೆ ಇಲಾಖೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ಚುನಾವಣೆ ಕಳೆಯುವವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಚ್ಚಳಿಕೆ ನೀಡಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸದ್ಯದ ಮಟ್ಟಿಗೆ ಸಣ್ಣ ಜಯ ಲಭಿಸಿದ್ದು, ಐಟಿ ನೋಟಿಸ್ ನಿಂದಾಗಿ ಪಕ್ಷ ಎದುರಿಸುತ್ತಿದ್ದ ಸಮಸ್ಯೆ ತಾತ್ಕಾಲಿಕವಾಗಿ ಶಮನಗೊಂಡಿದೆ.

ಐಟಿ ನೋಟಿಸ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ನೇತೃತ್ವದ ಪೀಠವು ಚುನಾವಣೆ ಕಳೆಯುವವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಆದಾಯ ತೆರಿಗೆ ಇಲಾಖೆಗೆ ಆದೇಶಿಸಿತು. ಕೋರ್ಟ್ ಆದೇಶದಂತೆ ತಾನು ನೀಡಿರುವ ನೋಟಿಸ್ ಸಂಬಂಧ ಚುನಾವಣೆವರೆಗೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಪರ ವಕೀಲರು ವಾಗ್ದಾನ ನೀಡಿದರು.
ಜುಲೈ 24 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ. 2011-2012ರ ಮೌಲ್ಯಮಾಪನ ವರ್ಷಗಳ ಆದಾಯ ತೆರಿಗೆಯನ್ನು ಮರು ಮೌಲ್ಯಮಾಪನ ಮಾಡಲು ಆದಾಯ ತೆರಿಗೆ ಇಲಾಖೆಗೆ ಅವಕಾಶ ನೀಡುವ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ 2018ರಲ್ಲಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದೆ.

ಪಕ್ಷದ ವಿರುದ್ಧ ಪ್ರಾರಂಭಿಸಲಾದ ಆದಾಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಮಾರ್ಚ್ 28 ರಂದು ಹೈಕೋರ್ಟ್ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿರುವುದನ್ನು ಸುಪ್ರೀಂ ಕೋರ್ಟ್‌ ಮುಂದೆ ಇಂದು ನಡೆದ ವಿಚಾರಣೆಯಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ. ನ್ಯಾಯಾಲಯವು ವಜಾಗೊಳಿಸಿದ ನಾಲ್ಕು ಅರ್ಜಿಗಳು 2017-18, 2018-19, 2019-20 ಮತ್ತು 2020-21 ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿವೆ. ಒಂದು ದಿನದ ನಂತರ, ಕಾಂಗ್ರೆಸ್ ಮಾರ್ಚ್ 29 ರಂದು 2017-18 ಮತ್ತು 2020-21 ರ ಮೌಲ್ಯಮಾಪನ ವರ್ಷಗಳಿಗೆ 1,823 ಕೋಟಿ ರೂಪಾಯಿ ಮೌಲ್ಯದ ತೆರಿಗೆ ನೋಟಿಸ್‌ಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆಯು ಪಕ್ಷಕ್ಕೆ ಮತ್ತೆ ಮೂರು ನೋಟಿಸ್‌ಗಳನ್ನು ನೀಡಿದ್ದು, ಒಟ್ಟು ತೆರಿಗೆ ಬೇಡಿಕೆಯನ್ನು 3,567 ಕೋಟಿ ರೂ. ಎಂದು ಹೇಳಿದೆ.

Previous Post
ಭಾರತದಿಂದ ವಶಪಡಿಸಿಕೊಂಡ ಅರುಣಾಚಲ ಪ್ರದೇಶದ ಭೂಭಾಗಕ್ಕೆ ತನ್ನ ಹೆಸರಿಟ್ಟ ಚೀನಾ
Next Post
10 ವರ್ಷದ ದುರಾಡಳಿತದ ನಂತರ ಈಗ ಎಚ್ಚರಗೊಂಡಿದ್ದೀರಿ: ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ

Recent News