ಕೇಜ್ರಿವಾಲ್‌ನ್ನು ಜೈಲಲ್ಲಿರಿಸಿ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿರುವ ಬಿಜೆಪಿ: ಅತಿಶ

ಕೇಜ್ರಿವಾಲ್‌ನ್ನು ಜೈಲಲ್ಲಿರಿಸಿ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿರುವ ಬಿಜೆಪಿ: ಅತಿಶ

ನವದೆಹಲಿ, ಏ. 3: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾರ್ಚ್ 21ರಂದು ಬಂಧನಕ್ಕೊಳಗಾದಾಗಿನಿಂದ ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಎಎಪಿ ಹಿರಿಯ ನಾಯಕಿ, ದೆಹಲಿ ಸಚಿವೆ ಅತಿಶಿ ಹೇಳಿದ್ದು, ಅವರನ್ನು ಜೈಲಿನಲ್ಲಿ ಇರಿಸುವ ಮೂಲಕ ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದ್ದಾರೆ. ಏಪ್ರಿಲ್ 15ರವರೆಗೆ ಕೇಜ್ರಿವಾಲ್ ಜೈಲಿನಲ್ಲಿರಬೇಕಾಗಿರುವ ತಿಹಾರ್ ಜೈಲಿನ ಆಡಳಿತವು ಈ ಆಪಾದನೆಯನ್ನು ತಳ್ಳಿ ಹಾಕಿದೆ. ತಿಹಾರ್ ಜೈಲಿನ ಹಿರಿಯ ಅಧಿಕಾರಿಯೊಬ್ಬರು ಕೇಜ್ರಿವಾಲ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರಿಗೆ ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಅರವಿಂದ್ ಕೇಜ್ರಿವಾಲ್ ಅವರು ಮಧುಮೇಹದಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆಗಳ ನಡುವೆಯೂ ಅವರು ದಿನದ 24 ಗಂಟೆಗಳ ಕಾಲ ದೇಶ ಸೇವೆಯಲ್ಲಿ ತೊಡಗಿದ್ದರು. ಅವರ ಬಂಧನದಿಂದ ಕೇಜ್ರಿವಾಲ್ ಅವರ ತೂಕ 4.5 ಕೆಜಿಯಷ್ಟು ಕಡಿಮೆಯಾಗಿದೆ. ಇದು ತುಂಬಾ ಆತಂಕಕಾರಿಯಾಗಿದೆ. ಬಿಜೆಪಿ ಕೇಜ್ರಿವಾಲ್‌ ಅವರನ್ನು ಜೈಲಿನಲ್ಲಿ ಇರಿಸಿ ಅವರ ಆರೋಗ್ಯವನ್ನು ಅಪಾಯದಲ್ಲಿರಿಸಿದೆ ಎಂದು ಆರೋಪಿಸಿದ್ದಾರೆ.

ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿಗೆ ಮನೆ ಅಡುಗೆ ಸ್ವೀಕರಿಸಲು ಅವಕಾಶ ನೀಡಲಾಗಿದೆ. ಮಂಗಳವಾರ ಬೆಳಗ್ಗೆ ಕೇಜ್ರಿವಾಲ್ ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿತ್ತು. ಅವರ ಶುಗರ್ ಲೆವೆಲ್ ಏರುಪೇರಾಗುತ್ತಿದ್ದರಿಂದ ತಿಹಾರ್ ಜೈಲಿನ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿಹಾರ್ ಜೈಲಿನ ಮೂಲಗಳ ಪ್ರಕಾರ, ಅವರನ್ನು ಜೈಲಿಗೆ ಕರೆ ತಂದಾಗ ಅವರ ತೂಕ 55 ಕೆಜಿ ಇತ್ತು ಹಾಗೂ ಅವರ ತೂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇಜ್ರಿವಾಲ್ ಅವರ ದೇಹದಲ್ಲಿ ಸಕ್ಕರೆ ಪ್ರಮಾಣವು ಸಾಮಾನ್ಯವಾಗಿದ್ದು, ಅವರು ಪ್ರತಿ ದಿನ ಬೆಳಗ್ಗೆ ಅವರು ಯೋಗ ಮತ್ತು ಧ್ಯಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ನಿವಾಸದಲ್ಲಿ ಹಲವು ಗಂಟೆಗಳ ವಿಚಾರಣೆಯ ನಂತರ ಮಾರ್ಚ್ 21 ರಾತ್ರಿ ಅವರನ್ನು ಬಂಧಿಸಲಾಗಿತ್ತು. ಬಂಧನವಾದ ರಾತ್ರಿ ಕೇಜ್ರಿವಾಲ್ ಅವರು ತಮ್ಮ ಐಫೋನ್ ಸ್ವಿಚ್ ಆಫ್ ಮಾಡಿ ಪಾಸ್ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದರು ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದರು. ಫೋನ್ ಅನ್ ಲಾಕ್ ಮಾಡಲು ಜಾರಿ ನಿರ್ದೇಶನಾಲಯ ಆ್ಯಪಲ್ ಸಂಸ್ಥೆಯನ್ನು ಸಂಪರ್ಕಿಸಿದೆ, ಆದರೆ ಫೋನ್ ಅನ್ ಲಾಕ್ ಮಾಡಲು ಆ್ಯಪಲ್ ಸಂಸ್ಥೆ ನಿರಾಕರಿಸಿದೆ ಎಂದು ಇಡಿ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

Previous Post
ED ವಕೀಲರ ಪಟ್ಟಿಯಲ್ಲಿ ಸುಷ್ಮಾ ಸ್ವರಾಜ್ ಪುತ್ರಿ ಹೆಸರು: ತಪ್ಪೊಪ್ಪಿಗೆ
Next Post
ಪರಿಹಾರ ಬಿಡುಗಡೆ ವಿಳಂಬ: ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು

Recent News