ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಿಗ್‌ ಶಾಕ್: ಸಂಸದ ಉನ್ಮೇಶ್ ಪಾಟೀಲ್ ಶಿವಸೇನೆಗೆ(ಉದ್ಧವ್‌ ಬಣ) ಸೇರ್ಪಡೆ

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಿಗ್‌ ಶಾಕ್: ಸಂಸದ ಉನ್ಮೇಶ್ ಪಾಟೀಲ್ ಶಿವಸೇನೆಗೆ(ಉದ್ಧವ್‌ ಬಣ) ಸೇರ್ಪಡೆ

ಮುಂಬೈ, ಏ. 3: ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಟಿಕೆಟ್‌ ಹಂಚಿಕೆ ಬಿಕ್ಕಟ್ಟಿನ ಮಧ್ಯೆ ಜಲಗಾಂವ್‌ನ ಬಿಜೆಪಿ ಸಂಸದ ಉನ್ಮೇಶ್ ಪಾಟೀಲ್ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಶಿವಸೇನೆ (ಯುಬಿಟಿ) ಬಣವನ್ನು ಸೇರ್ಪಡೆಗೊಂಡಿದ್ದಾರೆ. ಜಲಗಾಂವ್‌ನ ಹಾಲಿ ಬಿಜೆಪಿ ಸಂಸದ ಉನ್ಮೇಶ್ ಪಾಟೀಲ್ ಅವರು ಬುಧವಾರ ಶಿವಸೇನಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಪಕ್ಷದ ಮುಖಂಡರಾದ ಸಂಜಯ್ ರಾವುತ್ ಮತ್ತು ಅರವಿಂದ್ ಸಾವಂತ್ ಅವರ ಸಮ್ಮುಖದಲ್ಲಿ ಶಿವಸೇನೆ ಉದ್ಧವ್‌ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ. ಪಾಟೀಲ್ ಅವರನ್ನು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಬಾಂದ್ರಾದಲ್ಲಿರುವ ಮಾತೋಶ್ರೀ ನಿವಾಸದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಪಾಟೀಲ್ ಸೇರ್ಪಡೆ ಬಳಿಕ ಸಂಜಯ್ ರಾವುತ್ ಮಾತೋಶ್ರೀಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಜಲಗಾಂವ್‌ನಿಂದ ಲೋಕಸಭೆ ಚುನಾವಣೆಗೆ ಸ್ಫರ್ಧಿಸಲು ಎನ್‌ಡಿಎ ಮೈತ್ರಿಕೂಟದಿಂದ ಟಿಕೆಟ್‌ ಸಿಗದ ಹಿನ್ನೆಲೆ ಉನ್ಮೇಶ್ ಪಾಟೀಲ್ ಶಿವಸೇನೆ ಉದ್ಧವ್‌ ಬಣದ ಸಂಜಯ್‌ ರಾವತ್‌ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದರು. ಜಲಗಾಂವ್‌ನಿಂದ ಮಹಾ ವಿಕಾಸ್ ಅಘಾಡಿ ಮೈತ್ರಿಯ ಅಂದರೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಉನ್ಮೇಶ್ ಪಾಟೀಲ್ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಉನ್ಮೇಶ್ ಪಾಟೀಲ್ 2019ರಲ್ಲಿ ಜಲಗಾಂವ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಕಂಡಿದ್ದರು. ಅವರು ಒಟ್ಟು 7.13 ಲಕ್ಷ ಮತಗಳನ್ನು ಪಡೆದಿದ್ದರು. ಆದರೆ 2024ರ ಲೋಕಸಭೆ ಚುನಾವಣೆಗೆ ಉನ್ಮೇಶ್ ಪಾಟೀಲ್‌ಗೆ ಟಿಕೆಟ್‌ ನೀಡದೆ ಸ್ಮಿತಾ ವಾಘ್ ಅವರಿಗೆ ಎನ್‌ಡಿಎ ಟಿಕೆಟ್‌ ನೀಡಲಾಗಿತ್ತು. ಇದರಿಂದ ಉನ್ಮೇಶ್ ಪಾಟೀಲ್‌ ಅಸಮಾಧಾನಗೊಂಡಿದ್ದು, ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಟಿಕೆಟ್‌ ಹಂಚಿಕೆ ಬಿಕ್ಕಟ್ಟು ಉದ್ಭವಿಸಿತ್ತು, ಬಿಜೆಪಿ, ಶಿವಸೇನಾ ಶಿಂಧೆ ಬಣ, ಎನ್‌ಸಿಪಿ ಅಜಿತ್‌ ಪವಾರ್‌ ಬಣದ ನಡುವೆ ಟಿಕೆಟ್‌ಗೆ ಪೈಪೋಟಿ ನಡೆದಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕುದ್ದು ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದರು.

Previous Post
ಪರಿಹಾರ ಬಿಡುಗಡೆ ವಿಳಂಬ: ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು
Next Post
ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ರಾಜ್ಯಸಭೆಯಿಂದ ನಿವೃತ್ತಿ

Recent News