ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಂಡಿದ್ದವರು ಯಾರು?: ಮೋದಿಯ ‘ಮುಸ್ಲಿಂ ಲೀಗ್’ ಟೀಕೆಗೆ ರಾಹುಲ್ ಗಾಂಧಿ ತಿರುಗೇಟು
ನವದೆಹಲಿ, ಏ. 10: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ಛಾಪು’ ಟೀಕೆಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ರಾಜಕೀಯ ವೇದಿಕೆಗಳಲ್ಲಿ ಸುಳ್ಳು ಹೇಳಿಕೆಗಳ ಹೊರತಾಗಿಯೂ ಇತಿಹಾಸವು ಬದಲಾಗದೆ ಉಳಿದಿದೆ’ ಎಂದು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಯು ಸಿದ್ಧಾಂತಗಳ ಘರ್ಷಣೆಯನ್ನು ಪ್ರತಿನಿಧಿಸುತ್ತದೆ. ಒಂದು ಕಡೆ ಭಾರತವನ್ನು ಏಕೀಕರಿಸುವಲ್ಲಿ ತನ್ನ ಪಾತ್ರಕ್ಕೆ ಹೆಸರುವಾಸಿಯಾದ ಕಾಂಗ್ರೆಸ್ ನಿಂತಿದ್ದರೆ, ಇನ್ನೊಂದು ಬದಿಯಲ್ಲಿ ವಿಭಜನೆಯನ್ನು ಶಾಶ್ವತಗೊಳಿಸುತ್ತಿರುವವರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧವಾಗಿದೆ! ಒಂದು ಕಡೆ, ಭಾರತವನ್ನು ಯಾವಾಗಲೂ ಒಗ್ಗೂಡಿಸುವ ಕಾಂಗ್ರೆಸ್ ಇದೆ, ಮತ್ತು ಇನ್ನೊಂದು ಬದಿಯಲ್ಲಿ ಯಾವಾಗಲೂ ಜನರನ್ನು ವಿಭಜಿಸಲು ಪ್ರಯತ್ನಿಸುವವರು ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ರಾಹುಲ್ ಹೇಳಿದ್ದಾರೆ. ದೇಶವನ್ನು ವಿಭಜಿಸುವ ಗುರಿ ಹೊಂದಿರುವ ಶಕ್ತಿಗಳ ಪರವಾಗಿ ಯಾರು ಮತ್ತು ಅದರ ಏಕತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಯಾರು ಎಂದು ಐತಿಹಾಸಿಕ ಘಟನೆಗಳು ತೋರಿಸುತ್ತವೆ ಎಂದು ಅವರು ಹೇಳಿದರು.
“ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ, ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಂಡವರು ಯಾರು? ಭಾರತದ ಜೈಲುಗಳು ಕಾಂಗ್ರೆಸ್ ನಾಯಕರಿಂದ ತುಂಬಿದಾಗ, ದೇಶವನ್ನು ವಿಭಜಿಸುವ ಶಕ್ತಿಗಳೊಂದಿಗೆ ರಾಜ್ಯಗಳಲ್ಲಿ ಸರ್ಕಾರವನ್ನು ನಡೆಸುತ್ತಿದ್ದವರು ಯಾರು” ಎಂದು ರಾಹುಲ್ ಪ್ರಶ್ನಿಸಿದ್ದಾರೆ. ರಾಜಕೀಯ ವೇದಿಕೆಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದರೂ ಇತಿಹಾಸ ಬದಲಾಗದೆ ಉಳಿದಿದೆ ಎಂದಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯು ಸ್ವಾತಂತ್ರ್ಯ ಪೂರ್ವದ ಮುಸ್ಲಿಂ ಲೀಗ್ನಿಂದ ಪ್ರೇರಿತವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪದೇ ಪದೇ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿ ಪುಟವೂ ಭಾರತವನ್ನು ತುಂಡು ತುಂಡಾಗಿ ಒಡೆಯುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮುಸ್ಲಿಂ ಲೀಗ್ನಲ್ಲಿ ಪ್ರಚಲಿತದಲ್ಲಿದ್ದ ಅದೇ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಇದು ಸಂಪೂರ್ಣವಾಗಿ ಮುಸ್ಲಿಂ ಲೀಗ್ನ ಮುದ್ರೆಯನ್ನು ಹೊಂದಿದೆ ಮತ್ತು ಉಳಿದಿರುವುದೂ ಸಂಪೂರ್ಣವಾಗಿ ಎಡಪಂಥೀಯರ ಪ್ರಾಬಲ್ಯವಾಗಿದೆ ಎಂದು, ಕಾಂಗ್ರೆಸ್ ಪಕ್ಷದ ಜಾತಿ ಗಣತಿ ಮತ್ತು ಸಂಪತ್ತಿನ ಮರು ಹಂಚಿಕೆಯ ಘೋಷಣೆಗಳನ್ನು ಟೀಕಿಸಿ ಮೋದಿ ಹೇಳಿಕೆ ನೀಡಿದ್ದರು. ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಸೋಮವಾರ ಚುನಾವಣಾ ಆಯೋಗಕ್ಕೆ (ಇಸಿ) ದೂರು ಸಲ್ಲಿಸಿದೆ.