ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಕಾಂಗ್ರೆಸ್ ಸೇರ್ಪಡೆ

ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಕಾಂಗ್ರೆಸ್ ಸೇರ್ಪಡೆ

ನವದೆಹಲಿ, ಏ. 10: ಮಾಜಿ ಕೇಂದ್ರ ಸಚಿವ ಚೌಧರಿ ಬಿರೇಂದರ್ ಸಿಂಗ್ ಮತ್ತು ಅವರ ಪತ್ನಿ ಪ್ರೇಮಲತಾ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿರೇಂದರ್ ಸಿಂಗ್ ಅವರ ಪುತ್ರ ಹಾಗೂ ಬಿಜೆಪಿಯ ಮಾಜಿ ನಾಯಕ ಬ್ರಿಜೇಂದ್ರ ಸಿಂಗ್ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದರು. ಪ್ರೇಮಲತಾ ಸಿಂಗ್ ಹರಿಯಾಣದ ಮಾಜಿ ಬಿಜೆಪಿ ಶಾಸಕರಾಗಿದ್ದರೆ, ಬಿರೇಂದರ್ ಸಿಂಗ್ ಮೊದಲ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಬಿರೇಂದರ್ ಸಿಂಗ್ ಅವರು ಸುಮಾರು 10 ವರ್ಷಗಳ ಹಿಂದೆ ಬಿಜೆಪಿಗೆ ಸೇರಿದ್ದರು. ಮಾರ್ಚ್ 10 ರಂದು ಅವರ ಮಗ ಕಾಂಗ್ರೆಸ್ ಸೇರಿದ ನಂತರ, ಬಿರೇಂದರ್ ಸಿಂಗ್ ಕೂಡ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಸರ್ಕಾರದಲ್ಲಿ ಬಿರೇಂದರ್ ಸಿಂಗ್ ಕೇಂದ್ರ ಉಕ್ಕು ಸಚಿವರಾಗಿದ್ದರು. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರಾಗಿಯೂ ಅವರು ಅಧಿಕಾರ ವಹಿಸಿಕೊಂಡಿದ್ದರು. ಪ್ರಸ್ತುತ ರದ್ದಾಗಿರುವ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧದ ಆಂದೋಲನದ ಸಮಯದಲ್ಲಿ, ಬಿರೇಂದರ್ ಸಿಂಗ್ ರೈತರಿಗೆ ತಮ್ಮ ಬೆಂಬಲ ನೀಡಿದ್ದರು. ಬಿರೇಂದರ್ ಸಿಂಗ್ ಹರಿಯಾಣದ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ಗೆ ಮರಳಿರುವ ಕುರಿತು ಕೇಳಿದ್ದಕ್ಕೆ ಉತ್ತರಿಸಿದ ಬಿರೇಂದರ್ ಸಿಂಗ್, “ನಾನು 42 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದೆ. ಕೆಲವು ಕಾರಣಾಂತರಗಳಿಂದ 2014ರಲ್ಲಿ ಬಿಜೆಪಿ ಸೇರಿದೆ. ಬಿಜೆಪಿ ಸೇರಿದ ಬಳಿಕ ಎರಡು ಪಕ್ಷಗಳ ನಡುವಿನ ಸಿದ್ದಾಂತ ನನಗೆ ವಿಭಿನ್ನವಾಗಿ ಕಂಡವು. ಕಾಂಗ್ರೆಸ್-ಬಿಜೆಪಿ ಸಿದ್ದಾಂತಗಳ ನಡುವೆ ವ್ಯತ್ಯಾಸವಿದೆ, ಅಂತರವಿದೆ. ಇದನ್ನು ನಾನು ಅನುಭವಿಸಿದ್ದೇನೆ. ಈ ಹಿನ್ನೆಲೆ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದೇನೆ ಎಂದು ಹೇಳಿದ್ದಾರೆ.

Previous Post
ಸಂವಿಧಾನ ಬದಲಾಯಿಸಲು ಪ್ರಯತ್ನಿಸಿದರೆ ರಾಜೀನಾಮೆ ನೀಡುವೆ: ಅಠವಳೆ
Next Post
ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕೇಜ್ರಿವಾಲ್ ಮೇಲ್ಮನವಿ

Recent News