ಇಂಡಿಯಾ ಮೈತ್ರಿ ಪರ ‘ಮಹಾ’ ಜನತೆ- ಎನ್ಡಿಎ ಗೆಲ್ಲಬಹುದಾದ ಸೀಟುಗಳೆಷ್ಟು- ಸಮೀಕ್ಷೆ, ಅಂಕಿಅಂಶ
ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಭರದಿಂದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಒಟ್ಟು 543 ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ಆರಂಭವಾಗಲಿದೆ. ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೆ ಚುನಾವಣಾ ಸಮೀಕ್ಷೆಗಳು ಬಹಿರಂಗವಾಗುತ್ತಿದೆ. ಈ ಬಾರಿ ಅಧಿಕಾರಕ್ಕೆ ಬರುವುದು ಎನ್ಡಿಎ ಮೈತ್ರಿಕೂಟವೇ ಅಥವಾ ಇಂಡಿಯಾ ಮೈತ್ರಿ ಕೂಟವಾ ಎಂಬ ಕುತೂಹಲದಲ್ಲಿರುವ ದೇಶದ ಜನತೆಗೆ ಅನೇಕ ಸಂಸ್ಥೆಗಳು ಸಮೀಕ್ಷೆ ನೀಡುತ್ತಿದೆ. ಲೋಕ್ ಪೋಲ್ (Lok Poll) ಸಂಸ್ಥೆ ಕೂಡ ಸಮೀಕ್ಷೆ ನಡೆಸಿದ್ದು, ಮಹಾರಾಷ್ಟ್ರದಲ್ಲಿ ಕಮಲ ಅಧಿಕಾರ ಹಿಡಿಯುತ್ತಾ ಎಂಬ ಕುರಿತು ಸಮೀಕ್ಷೆ ನಡೆಸಲಾಗಿದೆ.
ಇನ್ನೂ ಮಹಾರಾಷ್ಟ್ರದ 48 ಕ್ಷೇತ್ರಗಳ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 21 ರಲ್ಲಿ ಹೋರಾಡಲು ಸಜ್ಜಾಗಿದೆ, ಕಾಂಗ್ರೆಸ್ 17 ರಲ್ಲಿ ಸ್ಪರ್ಧಿಸುತ್ತಿದ್ದು, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಉಳಿದ 10 ಸ್ಥಾನಗಳಲ್ಲಿ ಕಣಕ್ಕಿಳಿಯುತ್ತಿದೆ. ಅಲ್ಲದೇ ಕಾಂಗ್ರೆಸ್ ಈಗ ಸಾಂಗ್ಲಿ ಮತ್ತು ಭಿವಂಡಿ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದು, ಸಾಂಗ್ಲಿಯಲ್ಲಿ ಸೇನಾ(ಯುಬಿಟಿ) ಮತ್ತು ಭಿವಂಡಿಯಲ್ಲಿ ಎನ್ಸಿಪಿ (ಎಸ್ಪಿ) ಸ್ಪರ್ಧಿಸಿದೆ. ಲೋಕ್ ಪೋಲ್ (Lok Poll) ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿ ಕೂಟಕ್ಕೆ ಬಿಗ್ ಶಾಕ್ ಎದುರಾಗಿದ್ದು, ಈ ಸಮೀಕ್ಷೆಯ ಪ್ರಕಾರ ಎನ್ ಡಿ ಎ ಮೈತ್ರಿ ಕೂಟವೂ 21 ರಿಂದ 24 ಸ್ಥಾನಗಳಲ್ಲಿ ಗೆಲ್ಲುವು ಸಾಧಿಸಲಿದ್ದು, ಇಂಡಿಯಾ ಮೈತ್ರಿಕೂಟವೂ 23-36 ಕ್ಷೇತ್ರಗಳಲ್ಲಿ ಗೆಲ್ಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಲೋಕ್ ಪೋಲ್ ಪ್ರಕಾರ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ನಷ್ಟವನ್ನು ಅನುಭವಿಸಲಿದೆ ಎಂದು ಅಂದಾಜಿಸಲಾಗಿದೆ. ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಕ್ರಮವಾಗಿ 23 ಮತ್ತು 18 ಸ್ಥಾನಗಳನ್ನು ಗಳಿಸಿ ಮೈತ್ರಿ ಮಾಡಿಕೊಂಡಿದ್ದವು. 2024 ರಲ್ಲಿನ ಲೋಕಸಭಾ ಚುನಾವಣಾ ಪರಿಸ್ಥಿತಿಯು ಬದಲಾಗಿದೆ, ಶಿವಸೇನೆ ಮತ್ತು ಎನ್ಸಿಪಿ ಎರಡೂ ಬಣಗಳು ಎನ್ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡಿವೆ.
ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ತಲಾ 1350 ಮಾದರಿಗಳನ್ನು ಆಧರಿಸಿದ ಸಮೀಕ್ಷೆಯು ಶಿವಸೇನೆಯ ಶಿಂಧೆ ಬಣ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ತಮ್ಮ ಮತ ಪಾಲನ್ನು ಸ್ಥಾನಗಳಾಗಿ ಪರಿವರ್ತಿಸಲು ಹೆಣಗಾಡುತ್ತಿದೆ ಎಂದು ಹೇಳಲಾಗಿದೆ.
ಹಾಲಿ ಸಂಸದರ ವಿರುದ್ಧದ ವಿರೋಧಿ ಭಾವನೆಗಳು NDA ಯ ಭವಿಷ್ಯವನ್ನು ಕುಂಠಿತಗೊಳಿಸಬಹುದು, ಅಲ್ಲದೆ, ಮುಸ್ಲಿಂ, ಎಸ್ಸಿ ಮತ್ತು ಎಸ್ಟಿ ಮತಗಳ ಬಲವರ್ಧನೆಯು ಇಂಡಿಯಾ ಬ್ಲಾಕ್ಗೆ ಅನುಕೂಲವಾಗಬಹುದು. ಇನ್ನೂ ಮರಾಠರ ಅಸಮಾಧಾನ ಬಿಜೆಪಿಗೆ ಈ ಚುನಾವಣೆಯಲ್ಲಿ ದೊಡ್ಡ ಸವಾಲಾಗಿದೆ. ಇನ್ನೂ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಮುಂಬರುವ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಗೆ ಬೇಷರತ್ ಬೆಂಬಲವನ್ನು ನೀಡಿದ್ದಾರೆ.