ಗುಜರಾತ್: ಕೇಂದ್ರ ಸಚಿವರ ವಿರುದ್ಧ ಕ್ಷತ್ರಿಯರಿಂದ ಬೃಹತ್ ಪ್ರತಿಭಟನೆ

ಗುಜರಾತ್: ಕೇಂದ್ರ ಸಚಿವರ ವಿರುದ್ಧ ಕ್ಷತ್ರಿಯರಿಂದ ಬೃಹತ್ ಪ್ರತಿಭಟನೆ

ರಾಜ್‌ಕೋಟ್‌, ಏ. 15: ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ಪರ್ಷೋತ್ತಮ್ ರೂಪಲಾ ಅವರನ್ನು ಪಕ್ಷದ ಉಮೇದುವಾರಿಕೆಯಿಂದ ವಜಾ ಮಾಡುವಂತೆ ಆಗ್ರಹಿಸಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕ್ಷತ್ರಿಯ ಸಮುದಾಯದ ಒಂದು ಲಕ್ಷಕ್ಕೂ ಅಧಿಕ ಜನರು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದ್ದಾರೆ. ಸಚಿವ ರೂಪಾಲಾ ವಿರುದ್ಧ ರಾಜ್‌ಕೋಟ್‌ನಲ್ಲಿ ಕ್ಷತ್ರಿಯ ಸಮುದಾಯ ನಡೆಸಿದ ಎರಡನೇ ಬೃಹತ್ ಸಮಾವೇಶ ಇದಾಗಿದೆ.

ಕ್ಷತ್ರಿಯ ರಾಜಮನೆತನದ ಕುಟುಂಬಗಳು ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು ಮತ್ತು ಅವರ ಹೆಣ್ಣು ಮಕ್ಕಳನ್ನು ಬ್ರಿಟಿಷರಿಗೆ ಮದುವೆ ಮಾಡಿ ಕೊಡುತ್ತಿದ್ದರು ಎಂದು ಸಚಿವ ರೂಪಾಲ ಹೇಳಿಕೆ ನೀಡಿದ್ದರು. ಇದು ರಜಪೂರನ್ನು ಕೆರಳಿಸುವಂತೆ ಮಾಡಿದೆ. ಭಾನುವಾರ, ಸಮುದಾಯದ ಮುಖಂಡರು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಮತ್ತು ರೂಪಾಲಾ ಅವರ ನಾಮಪತ್ರವನ್ನು ಹಿಂಪಡೆಯದಿದ್ದರೆ, ಏಪ್ರಿಲ್ 19 ರ ನಂತರ ಅಹಮದಾಬಾದ್‌ನಲ್ಲಿ ಮತ್ತೊಂದು ಬೃಹತ್ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ.

ರೂಪಾಲಾ ಅವರ ಉಮೇದುವಾರಿಕೆಯನ್ನು ಹಿಂಪಡೆಯಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಈ ವಿಷಯದಲ್ಲಿ ನಾವು ದೃಢವಾಗಿ ನಿಂತಿದ್ದೇವೆ ಎಂದು ಕ್ಷತ್ರಿಯ ಸಮುದಾಯದ ಕೋರ್ ಕಮಿಟಿ ಸದಸ್ಯ ರಾಮಜುಭಾ ಜಡೇಜಾ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ. ಈ ಹಿಂದೆ, ಸದಸ್ಯರು ತಪ್ಪು ಮಾಡಿದಾಗ ಬಿಜೆಪಿ ನಾಯಕತ್ವ ಅಂತವರ ವಿರುದ್ಧ ಕ್ರಮ ತೆಗೆದು ಕೊಂಡಿತ್ತು. ಇದರಲ್ಲಿ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರಕರಣವೂ ಸೇರಿದೆ” ಎಂದು ಜಡೇಜಾ ನೆನಪಿಸಿದ್ದಾರೆ. ಮಾರ್ಚ್ 22 ರಂದು ದಲಿತ ಸಮುದಾಯದ ಸಭೆಯಲ್ಲಿ ಕೇಂದ್ರ ಸಚಿವರು ಕ್ಷತ್ರಿಯರ ಕುರಿತು ನೀಡಿದ ನಂತರ ಕ್ಷತ್ರಿಯ ಸಮುದಾಯದ ಸುಮಾರು 75 ವಿವಿಧ ಗುಂಪುಗಳು ಅಥವಾ ಕುಲಗಳು ಪ್ರತಿಭಟನೆ ನಡೆಸುತ್ತಿವೆ.

ಸಮುದಾಯದ ಉನ್ನತ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿಯು ಬಿಜೆಪಿಯ ಕ್ಷತ್ರಿಯ ನಾಯಕರೊಂದಿಗೆ ಎರಡು ಸಭೆಗಳನ್ನು ನಡೆಸಿದೆ. ಆದರೆ, ಮಾತುಕತೆಗಳು ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಏಕೆಂದರೆ, ರೂಪಲಾ ಅವರ ಉಮೇದುವಾರಿಗೆ ಹಿಂಪಡೆಯಲು ಬಿಜೆಪಿ ನಾಯಕರು ಒಪ್ಪಿಲ್ಲ. ಈ ನಡುವೆ ರೂಪಲಾ ಅವರು ತನ್ನ ಹೇಳಿಕೆಗೆ ಸಂಬಂಧಪಟ್ಟಂತೆ ಎರಡು ಬಾರಿ ಕ್ಷತ್ರಿಯ ಸಮುದಾಯದ ಕ್ಷಮೆ ಕೇಳಿದ್ದಾರೆ. ಈ ಎಲ್ಲಾ ಗೊಂದಲಗಳ ನಡುವೆ ಕೇಂದ್ರ ಸಚಿವರು ಏಪ್ರಿಲ್ 16 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಮತ್ತು ರಾಜ್‌ಕೋಟ್ ನಗರದಲ್ಲಿ ರೋಡ್‌ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಘೋಷಿಸಿದೆ.

Previous Post
ಸಂವಿಧಾನ ಬದಲಾವಣೆ ಕುರಿತು ಪ್ರಸ್ತಾಪಿಸಿದ ಮತ್ತೋರ್ವ ಬಿಜೆಪಿ ಸಂಸದ
Next Post
ನ್ಯಾಯಾಂಗ ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿ ಉಳಿಯುವುದು ಅತ್ಯಗತ್ಯ: ಸಿಜೆಐಗೆ ಪತ್ರ

Recent News