ಭಾರತವು ‘ಪೊಲೀಸ್ ರಾಜ್’ ಅಲ್ಲ: ಜಮ್ಮು ಕಾಶ್ಮೀರ ಹೈಕೋರ್ಟ್

ಭಾರತವು ‘ಪೊಲೀಸ್ ರಾಜ್’ ಅಲ್ಲ: ಜಮ್ಮು ಕಾಶ್ಮೀರ ಹೈಕೋರ್ಟ್

ಶ್ರೀನಗರ, ಏ. 16: ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ 26 ವರ್ಷದ ಯುವಕನ ಬಂಧನವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರದ್ದುಗೊಳಿಸಿದ್ದು, ‘ಭಾರತವು ಪೊಲೀಸ್ ರಾಜ್’ ಅಲ್ಲ ಎಂದಿದೆ. ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರು ಮಾರ್ಚ್ 22 ರಂದು ನೀಡಿದ್ದ ತೀರ್ಪಿನಲ್ಲಿ ಬಂಧಿತ ಜಾಫರ್ ಅಹ್ಮದ್ ಪಾರೆ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ತೀರ್ಪನ್ನು ಕಳೆದ ಸೋಮವಾರ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಶೋಪಿಯಾನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಮೇ ತಿಂಗಳಿನಿಂದ ಪಾರೆಯನ್ನು ಬಾರಾಮುಲ್ಲಾ ಜೈಲಿನಲ್ಲಿ ಇರಿಸಲಾಗಿತ್ತು. ಶೋಪಿಯಾನ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವರ ಶಿಫಾರಸಿನ ಆಧಾರದ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಯುವಕ ಪಾರೆಯ ಬಂಧನಕ್ಕೆ ಆದೇಶಿಸಿದ್ದರು. ಪಾರೆ ವಿರುದ್ಧದ ಪೋಲೀಸ್ ದಾಖಲೆಯು ಆತನನ್ನು ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ “ಹಾರ್ಡ್‌ಕೋರ್ ಒಜಿಡಬ್ಲ್ಯ [ಓವರ್ ಗ್ರೌಂಡ್ ವರ್ಕರ್]” ಎಂದು ಹೇಳಿತ್ತು.

ಆದರೆ, ಬಂಧಿತ ಪಾರೆ ಯಾವುದೇ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎಫ್‌ಐಆರ್‌ಗಳಲ್ಲಿ ಆರೋಪಿಯಾಗಿಲ್ಲ. ಆತ ಏನು ತಪ್ಪು ಮಾಡಿದ್ದಾನೆ ಎಂಬ ಒಂದೇ ಒಂದು ಸಾಲಿನ ಉಲ್ಲೇಖವೂ ಇಲ್ಲ. ಆತ ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಭಾರ್ತಿ ಹೇಳಿದ್ದಾರೆ.
ಪೋಲಿಸ್ ದಾಖಲೆಗಳು ಮತ್ತು ಜಿಲ್ಲಾಧಿಕಾರಿಗಳು ಉಲ್ಲೇಖಿಸಿರುವ ಬಂಧನ ಕಾರಣಗಳಲ್ಲಿ ಕಾನೂನಿನ ಯಾವ ಅಧಿಕಾರಿ ಅರ್ಜಿದಾರರನ್ನು ಮೊದಲು ಬಂಧಿಸಿದ್ದರು ಮತ್ತು ನಂತರ ಯಾರು ವಿಚಾರಣೆಯನ್ನು ನಡೆಸಿದ್ದರು ಎನ್ನುವುದನ್ನು ದಾಖಲಿಸುವುದು ಅಗತ್ಯವಾಗಿದೆ ಎಂದು ತೀರ್ಪಿನಲ್ಲಿ ಹೇಳಿರುವ ನ್ಯಾ.ಭಾರ್ತಿ, ಭಾರತವು ಕಾನೂನಿನ ಆಡಳಿತದಿಂದ ನಿಯಂತ್ರಿಸಲ್ಪಟ್ಟಿದೆ ಮತ್ತು ನಾಗರಿಕರ ವಿರುದ್ಧ ಪ್ರಕರಣವನ್ನು ದಾಖಲಿಸದೆ ಅವರನ್ನು ವಿಚಾರಣೆಗಾಗಿ ಕರೆದೊಯ್ಯುವಂತಿಲ್ಲ. ಜಿಲ್ಲಾಧಿಕಾರಿಗಳು ನೀಡಿರುವ ತಾರ್ಕಿಕತೆಯನ್ನು ಒಪ್ಪಿಕೊಂಡರೆ ಭಾರತವು ಪೋಲಿಸ್ ರಾಜ್ ಆಗಿದೆ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ. ಆದರೆ ಕಲ್ಪನೆಯಲ್ಲಿಯೂ ಭಾರತವು ಪೋಲಿಸ್ ರಾಜ್ ಅಲ್ಲ ಎಂದು ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪಾರೆ ಬಂಧನವು ಮೂಲತಃ ಕಾನೂನುಬಾಹಿರ ಮತ್ತು ಬಲವಂತದ ಕ್ರಮವಾಗಿದೆ ಎಂದು ತೀರ್ಪಿನಲ್ಲಿ ಹೇಳಿರುವ ಹೈಕೋರ್ಟ್ ಪಾರೆಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿದೆ.

Previous Post
ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ
Next Post
ನಾವು ಬ್ಯಾಲೆಟ್‌ ಪೇಪರ್‌ಗೆ ಹಿಂತಿರುಗಬಹುದು: ಸುಪ್ರೀಂ ಮುಂದೆ ಪ್ರಶಾಂತ್ ಭೂಷಣ್ ವಾದ

Recent News