ಸಿಎಎ ರದ್ದು, ಉಚಿತ ಎಲ್‌ಪಿಜಿ ಸಿಲಿಂಡರ್‌ ಟಿಎಂಸಿ ಪ್ರಣಾಳಿಕೆ ಘೋಷಣೆ

ಸಿಎಎ ರದ್ದು, ಉಚಿತ ಎಲ್‌ಪಿಜಿ ಸಿಲಿಂಡರ್‌ ಟಿಎಂಸಿ ಪ್ರಣಾಳಿಕೆ ಘೋಷಣೆ

ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ ರದ್ದು, ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಅನುಷ್ಠಾನವನ್ನು ನಿಲ್ಲಿಸುವುದಾಗಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಬುಧವಾರ ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್, ಪಶ್ಚಿಮ ಬಂಗಾಳದ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಮುಖ್ಯಮಂತ್ರಿಗಳ ವಿಶೇಷ ಸಲಹೆಗಾರ ಅಮಿತ್ ಮಿತ್ರ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪಾಲ್ಗೊಂಡಿರಲಿಲ್ಲ.

ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಪ್ರಸ್ತಾವಿತ ರಾಷ್ಟ್ರೀಯ ನಾಗರಿಕರ ನೋಂದಣಿಗೆ ವಿರೋಧ ವ್ಯಕ್ತಪಡಿಸಿದೆ, ಪಶ್ಚಿಮ ಬಂಗಾಳದಲ್ಲಿ ಇದನ್ನು ಎಂದಿಗೂ ಜಾರಿಗೆ ತರುವುದಿಲ್ಲ ಎಂದು ಹೇಳಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಅಡಿಯಲ್ಲಿ ದೈನಂದಿನ ಭತ್ಯೆಯನ್ನು ದಿನಕ್ಕೆ 400 ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಎಲ್ಲರಿಗೂ ಪಕ್ಕಾ ಮನೆಗಳನ್ನು ನಿರ್ಮಿಸುವ ಭರವಸೆಯನ್ನೂ ಪಕ್ಷ ನೀಡಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವರ್ಷಕ್ಕೆ 10 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು, ಪ್ರತಿ ಪಡಿತರ ಚೀಟಿದಾರರಿಗೆ ಮನೆಗೆ 5 ಕೆಜಿ ಉಚಿತ ಪಡಿತರ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 1,000 ರೂ. ಪಿಂಚಣಿ. 10 ಲಕ್ಷ ರೂಪಾಯಿಯ ವೈದ್ಯಕೀಯ ವಿಮೆ ನೀಡುವುದಾಗಿ ಭರವಸೆ ನೀಡಲಾಗಿದೆ.

ಯುವಕರಿಗೆ, ಎಲ್ಲ ವಿದ್ಯಾರ್ಥಿಗಳಿಗೆ 25 ವರ್ಷದವರೆಗೆ ಮಾಸಿಕ ವಿದ್ಯಾರ್ಥಿ ವೇತನ. ಉನ್ನತ ಶಿಕ್ಷಣ ಓದಲು ಬಯಸುವವರಿಗೆ 10 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ನೀಡಲಾಗುವುದು ಎಂದು ಪಕ್ಷ ಭರವಸೆ ನೀಡಿದೆ. ಬಂಗಾಳದ ಲಕ್ಷ್ಮೀರ್ ಭಂಡಾರ್ ಯೋಜನೆಯ ಮಾದರಿಯಲ್ಲಿ ದೇಶಾದ್ಯಂತ ಮಹಿಳೆಯರಿಗೆ ಮಾಸಿಕ ಹಣವನ್ನು ನೀಡಲಾಗುವುದು ಎಂದು ಟಿಎಂಸಿ ಪ್ರಣಾಳಿಕೆಯಲ್ಲಿ ತಿಳಿಸಿದೆ.

Previous Post
ಭಾರಿ ಸದ್ದು ಮಾಡ್ತಿದೆ ಕುರುಡು ಕಾಂಚಾಣ: 4650 ಕೋಟಿ ರೂ. ಹಣ ಜಪ್ತಿ ದಾಖಲೆ
Next Post
ಗುಂಪು ಹತ್ಯೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆದ ಹಿಂಸಾಚಾರಗಳ ಮಾಹಿತಿ ಕೇಳಿದ ಸುಪ್ರೀಂ

Recent News