ಶಿವಶಂಕರ ರೆಡ್ಡಿ ಮತ್ತು ಪುಟ್ಟಸ್ವಾಮಿ ಗೌಡರು ಒಟ್ಟಾಗಿ ರಕ್ಷಾ ರಾಮಯ್ಯರಿಗೆ 50 ಸಾವಿರ ಲೀಡ್ ಗೌರಬಿದನೂರಿನಲ್ಲಿ ಕೊಡಿಸುತ್ತಾರೆ: ಸಿ.ಎಂ.ಸಿದ್ದರಾಮಯ್ಯ
ಕೊರೊನಾದಂಥಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ಮನುಕುಲ ಯಾವತ್ತೂ ಕ್ಷಮಿಸುವುದಿಲ್ಲ. ನೀವೂ ಕ್ಷಮಿಸಬೇಡಿ: ಸಿ.ಎಂ.ಸಿದ್ದರಾಮಯ್ಯ ಕರೆ
ಗೌರಿಬಿದನೂರು ಏ 18: ಕೊರೊನಾದಂಥಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ಮನುಕುಲ ಯಾವತ್ತೂ ಕ್ಷಮಿಸುವುದಿಲ್ಲ. ನೀವೂ ಕ್ಷಮಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಇಡೀ ಮನುಕುಲ ಜೀವಭಯದಲ್ಲಿ ಆತಂಕದಲ್ಲಿ ಇದ್ದ ಕೊರೋನಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರನ್ನು ಹೃದಯ ಇದ್ದವರು ಯಾರೂ ಕ್ಷಮಿಸುವುದಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆ ಅರ್ಥಪೂರ್ಣ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನತೆ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಪ್ರಜ್ಞಾವಂತಿಕೆಯಿಂದ ಮತದಾನ ಮಾಡಿ ಎಂದು ಕರೆ ನೀಡಿದರು.
ಯಾವ ಕಾರಣಕ್ಕೂ ಇಲ್ಲಿ ಭ್ರಷ್ಟ ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು. ರಕ್ಷಾ ರಾಮಯ್ಯ ಸಜ್ಜನ ಮತ್ತು ಉತ್ಸಾಹಿ ಹಾಗೂ ಕಾಳಜಿ ಇರುವ ಅಭ್ಯರ್ಥಿ. ಇವರನ್ನು ಗೆಲ್ಲಿಸಿ ಕ್ಷೇತ್ರದ ಮತದಾರರ ಮತಗಳಿಗೆ ಒಳ್ಳೆಯ ಘನತೆ ತಂದು ಕೊಡುತ್ತಾರೆ ಎಂದರು.
ಗೌರಿಬಿದನೂರಿನಲ್ಲಿ 50 ಸಾವಿರ ಮತಗಳ ಲೀಡ್ ಸಿಕ್ಕೇ ಸಿಗತ್ತೆ
ಗೌರಿ ಬಿದನೂರು ಕ್ಷೇತ್ರದ ಶಿವಶಂಕರ ರೆಡ್ಡಿ ಮತ್ತು ಪುಟ್ಟಸ್ವಾಮಿ ಗೌಡರು ಒಟ್ಟಾಗಿ ರಕ್ಷಾ ರಾಮಯ್ಯರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ ಎನ್ನುವ ನಂಬಿಕೆ, ಭರವಸೆ ನನಗಿದೆ. ಹೀಗಾಗಿ ಇಬ್ಬರೂ ಸೇರಿ ಗೌರಿಬಿದನೂರು ಕ್ಷೇತ್ರದಲ್ಲಿ 50 ಸಾವಿರ ಲೀಡ್ ಕೊಡಿಸುತ್ತಾರೆ ಎಂದರು.
ಚುನಾವಣೆ ವೇಳೆ ಮಾತ್ರ ಮೋದಿ ಓಡೋಡಿ ಬರ್ತಾರೆ
ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆ ವೇಳೆಯಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ನಮ್ಮ ರಾಜ್ಯ ನೆನಪಾಗುವುದೇ ಇಲ್ಲ. ಪ್ರವಾಹ ಬಂದಾಗಲೂ ಈ ಕಡೆ ತಲೆ ಹಾಕಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ. ಚುನಾವಣೆ ವೇಳೆ ಭ್ರಷ್ಟರನ್ನು ಗೆಲ್ಲಿಸಲು ರಾಜ್ಯಕ್ಕೆ ಮೇಲಿಂದ ಬರ್ತಾರೆ ಅಂದರೆ ಅದು ರಾಜ್ಯದ ಜನತೆಗೆ ಮಾಡುವ ಅವಮಾನ ಅಲ್ಲವೇ ಎಂದು ಪ್ರಶ್ನಿಸಿದರು.
ಕೊರೋನಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ತಕ್ಕ ಕಾನೂನಿನ ಶಾಸ್ತಿ ಆಗೇ ಆಗುತ್ತದೆ. ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಮೇಲೆ ತಪ್ಪಿತಸ್ಥರಿಗೆ ಯಾವ ಶಿಕ್ಷೆ ಆಗುತ್ತದೆ ಎಂದು ಕಾದುನೋಡಿ ಎಂದರು.