ಆಪ್ ಚುನಾವಣಾ ಪ್ರಚಾರ ಗೀತೆ ನಿಷೇಧಿಸಿದ ಆಯೋಗ
ನವದೆಹಲಿ : ‘ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ’ ಎಂಬ ಪಕ್ಷದ ಲೋಕಸಭಾ ಪ್ರಚಾರ ಗೀತೆಗೆ ಚುನಾವಣಾ ಆಯೋಗ ನಿಷೇಧ ಹೇರಿದೆ’ ಎಂದು ಆಡಳಿತಾರೂಢ ಬಿಜೆಪಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ಎಎಪಿ ಆರೋಪ ಮಾಡಿದೆ.
ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿಯ ಹಿರಿಯ ನಾಯಕಿ ಅತಿಶಿ, ಪಕ್ಷವೊಂದರ ಪ್ರಚಾರದ ಹಾಡಿನ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿರುವುದು ಬಹುಶಃ ಇದೇ ಮೊದಲು. ಇಸಿ ಪ್ರಕಾರ, ಹಾಡು ಆಡಳಿತ ಪಕ್ಷ ಮತ್ತು ತನಿಖಾ ಸಂಸ್ಥೆಗಳನ್ನು ಕೆಟ್ಟ ಬೆಳಕಿನಲ್ಲಿ ತೋರಿಸುತ್ತದೆ ಎಂದು ಅವರು ಆರೋಪ ಮಾಡಿದ್ದಾರೆ.
ಗೀತೆಯು ಬಿಜೆಪಿಯನ್ನು ಉಲ್ಲೇಖಿಸುವುದಿಲ್ಲ ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ. ಇದು ವಾಸ್ತವಿಕ ವೀಡಿಯೊಗಳು ಮತ್ತು ಘಟನೆಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ದೆಹಲಿ ಸರ್ಕಾರದ ಸಚಿವರೂ ಆಗಿರುವ ಅತಿಶಿ, ಬಿಜೆಪಿ ಮಾಡಿದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ಇಸಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ವಾಧಿಕಾರ ಮಾಡಿದರೆ ಅದು ಸರಿ. ಆದರೆ ಯಾರಾದರೂ ಅದರ ಬಗ್ಗೆ ಮಾತನಾಡಿದರೆ ಅದು ತಪ್ಪು. ಇದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ತೋರಿಸುತ್ತದೆ. ಬಿಜೆಪಿ ಮಾಡಿದ ಚುನಾವಣೆ ಸಂಹಿತೆ ಉಲ್ಲಂಘನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾನು ಚುನಾವಣಾ ಆಯೋಗವನ್ನು ಒತ್ತಾಯಿಸಲು ಬಯಸುತ್ತೇನೆ. ವಿರೋಧ ಪಕ್ಷಗಳ ಪ್ರಚಾರವನ್ನು ನಿಲ್ಲಿಸಬೇಡಿ” ಎಂದು ಅವರು ಮನವಿ ಹೇಳಿದರು.
ಎಎಪಿಯ ಎರಡು ನಿಮಿಷಗಳ ಪ್ರಚಾರದ ಹಾಡನ್ನು ಎಎಪಿ ಶಾಸಕ ದಿಲೀಪ್ ಪಾಂಡೆ ಬರೆದು ಹಾಡಿದ್ದಾರೆ. ಗುರುವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು.