ಆಪ್ ಜೊತೆಗೆ ಮೈತ್ರಿ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ‌ ನೀಡಿದ ಅರವಿಂದರ್‌ ಸಿಂಗ್‌ ಲವ್ಲಿ

ಆಪ್ ಜೊತೆಗೆ ಮೈತ್ರಿ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ‌ ನೀಡಿದ ಅರವಿಂದರ್‌ ಸಿಂಗ್‌ ಲವ್ಲಿ

ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಜೊತೆಗಿನ ಮೈತ್ರಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಕಾಂಗ್ರೆಸ್‌ ವಿರುದ್ಧವೇ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿದ ಪಕ್ಷದೊಂದಿಗೆ ಮೈತ್ರಿಗೆ ದೆಹಲಿ ಕಾಂಗ್ರೆಸ್‌ ವಿರೋಧಿಸಿತ್ತು. ಈ ವಿರೋಧದ ನಡುವೆಯೂ ಪಕ್ಷವು ರಾಷ್ಟ್ರ ರಾಜಧಾನಿಯಲ್ಲಿ ಎಎಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಯಿತು ಎಂದು ಲವ್ಲಿ ಹೇಳಿದ್ದಾರೆ.

ಆಗಸ್ಟ್ 2023 ರಲ್ಲಿ ಹುದ್ದೆಗೆ ನೇಮಕಗೊಂಡ ಲವ್ಲಿ ಅವರು ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಿಲ್ಲದ ಕಾರಣ ಈ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ಕಾರಣವಿಲ್ಲ ಎಂದು ತಿಳಿಸಿದ್ದಾರೆ. ಶಿಕ್ಷಣ, ಆರೋಗ್ಯ, ರಸ್ತೆ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಆಪ್‌ ಮಾಡಿದ ಕಾರ್ಯಗಳನ್ನು ನಾವು ಈಗ ಅನುಮೋದಿಸುತ್ತಿದ್ದೇವೆ. ವಾಸ್ತವದಲ್ಲಿ ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ದೆಹಲಿಯ ಅಭಿವೃದ್ಧಿಯ ಕುರಿತು ಆಪ್‌ ಸುಳ್ಳು ಪ್ರಚಾರದ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳುವಳಿಕೆಯಿದೆ ಎಂದಿದ್ದಾರೆ.

1998 ಮತ್ತು 2013 ರ ನಡುವೆ ರಾಜಧಾನಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳ ಮೂರು ಸತತ ಅವಧಿಯಲ್ಲಿ ಲವ್ಲಿ ಕ್ಯಾಬಿನೆಟ್‌ನಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. 2015 ರಲ್ಲಿ ಪಕ್ಷದ ದೆಹಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಲವ್ಲಿ ಅವರನ್ನು ಕೇಳಲಾಗಿತ್ತು. ರಾಜೀನಾಮೆ ನೀಡಿದ ಬಳಿಕ 9 ತಿಂಗಳು ಬಿಜೆಪಿ ಸೇರಿದ್ದರು ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು. ದೆಹಲಿಯಲ್ಲಿ ಒಟ್ಟು 7 ಕ್ಷೇತ್ರಗಳಿದ್ದು ನಾಲ್ಕರಲ್ಲಿ ಆಪ್‌, ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

Previous Post
ಮೀಸಲಾತಿ ಅಗತ್ಯವಿರುವವರೆಗೂ ವಿಸ್ತರಿಸಬೇಕು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟನೆ
Next Post
ಗುಜರಾತ್ ಕರಾವಳಿಯಲ್ಲಿ 14 ಪಾಕಿಸ್ತಾನಿ ಪ್ರಜೆಗಳ ಬಂಧನ 602 ಕೋಟಿ ಮೌಲ್ಯದ 86 ಕೆಜಿ ನಿಷೇಧಿತ ಮಾಧಕ ದ್ರವ್ಯ ವಶಕ್ಕೆ

Recent News