ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಬಲತ್ಕಾರ: ಅಲ್ಕಾ ಲಂಬಾ

ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಬಲತ್ಕಾರ: ಅಲ್ಕಾ ಲಂಬಾ

ನವದೆಹಲಿ, ಏ. 29: ನಾರಿ ನ್ಯಾಯ ಕಾರ್ಯಕ್ರಮ ಘೋಷಿಸಿದ್ದೇವೆ, ಆದರೆ ದುರ್ದೈವ ಅಂದರೆ ಕರ್ನಾಟಕದಲ್ಲಿ ಮಹಿಳೆಯರ ಸಾಮೂಹಿಕ ಬಲತ್ಕಾರ ನಡೆದಿದೆ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಬರೀ ಒಬ್ಬ ಮಹಿಳೆಯರ ಮೇಲೆ ಅಲ್ಲ, ಅನೇಕ ಮಹಿಳೆಯರ ಮೇಲೆ ಬಲತ್ಕಾರ ಮಾಡಿದ್ದಾರೆ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಪರಿವಾರದಿಂದ ಇಂತಹ ಕೆಲಸ ಆಗಿದೆ. ಆದರೆ ಪ್ರಧಾನಿ ಮೋದಿ ಅವರು ಈ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದರು.

ಸುಮಾರು 3000 ವಿಡಿಯೋಗಳು ಹಾಸನದಲ್ಲಿ ಹರಿದಾಡುತ್ತಿವೆ. ಅವರ ಅಜ್ಜ ದೇಶದ ಪ್ರಧಾನಿಯಾಗಿದ್ದವರು. ಅವರ ಚಿಕ್ಕಪ್ಪ ಮಾಜಿಮುಖ್ಯಮಂತ್ರಿಯಾಗಿದ್ದರು. ಇಂತವರ ಕುಟುಂಬದಲ್ಲಿ ಈರೀತಿ ನಡೆದಿದೆ. ಎಸ್ಟಿಐ ತನಿಖೆಗೆ ಕೊಡಲಾಗಿದೆ. ಮಹಿಳಾ ಆಯೋಗ ದೂರು ದಾಖಲಿಸಿದೆ. ಇಷ್ಟಾದ್ರೂ ಮೊದಲು ಎಫ್ಐಆರ್ ದಾಖಲಿಸಿಲ್ಲ. ದೇಶದಲ್ಲಿ ಎಲ್ಲೂ ಇದರ ಬಗ್ಗೆ ಮಾತಿಲ್ಲ. ಆರೋಪಿ ವಿದೇಶಕ್ಕೆ ಹೋಗುತ್ತಾನೆ ಅಂದರೆ ಹೇಗೆ? ಪ್ರಜ್ವಲ್ ಗಂಭೀರ ಕೃತ್ಯ ಎಸಗಿದ್ದಾರೆ. ಅವರ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಬೇಕು ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಆಗ್ರಹಿಸಿದರು. ಅಪರಾಧಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಅತ್ಯಾಚಾರ, ಬಲಾತ್ಕಾರ ಹೆಚ್ಚಾಗುತ್ತಿದೆ. ಮೋದಿ ಪರಿವಾರದಲ್ಲಿ ಇಂತವರೇ ಸೇರಿಕೊಂಡಿದ್ದಾರೆ. ಅವರನ್ನ ರಕ್ಷಣೆ ಮಾಡುವ ಕೆಲಸ ನಡೆದಿದೆ ಇದನ್ನ ನಾವು ಯಾವುದೇ ಕಾರಣಕ್ಕೂ ಒಪ್ಪಲ್ಲ. ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು. ಅಪರಾಧಿ ಬಹಳ ಪ್ರಬಲ ಕುಟುಂಬದವರಾಗಿದ್ದಾರೆ. ಮೊದಲು ಆರೋಪಿಯನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ, ಗೃಹ ಸಚಿವರು ಇದರ ಬಗ್ಗೆ ಚಕಾರವೆತ್ತುತ್ತಿಲ್ಲವೇಕೆ? ಕರ್ನಾಟಕ ಪ್ರಕರಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಸ್ಮೃತಿ ಇರಾನಿ ಮೇಡಂ ಯಾಕೆ ಧ್ವನಿ ಎತ್ತುತ್ತಿಲ್ಲ? ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಯಾಕೆ ಮಾತನಾಡುತ್ತಿಲ್ಲ? ಯಾಕೆ ಈ ಪ್ರಕರಣದ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ? ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಯಾಕೆ ಮಾತನಾಡುತ್ತಿಲ್ಲ? ನಮ್ಮ ಮಹಿಳಾ ಘಟಕ ಇದನ್ನು ಸುಮ್ಮನೆ ಬಿಡಲ್ಲ. ದೇಶದ ಮೂಲೆಮೂಲೆಗೆ ಕೊಂಡೊಯ್ಯುತ್ತೇವೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತವಾಗಲಿದೆ. ಮಹಿಳೆಯರು ಯಾರೂ ಮತ ಹಾಕುವುದಿಲ್ಲ ಎಂದು ಹೇಳಿದರು.

ಅಪರಾಧಿ ಜರ್ಮನಿಗೆ ಹೋಗಿದ್ದಾನೆ. ಕೇಂದ್ರ ಸರ್ಜಾರ ಕೂಡಲೇ ಮಧ್ಯಪ್ರವೇಶಿಸಬೇಕು. ವಿದೇಶಾಂಗ ಸಚಿವರ ಮೂಲಕ ಗಮನಕ್ಕೆ ತರಬೇಕು. ಜರ್ಮನಿ ಸರ್ಕಾರದ ಜೊತೆ ಮಾತನಾಡಬೇಕು. ಆರೋಪಿಯನ್ನು ಕಾನೂನು‌ ಕ್ರಮಕ್ಕೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ನಾಥ್, ಮಾಜಿ‌ ಶಾಸಕಿ ಸೌಮ್ಯರೆಡ್ಡಿ, ಭವ್ಯ ನರಸಿಂಹಮೂರ್ತಿ ಉಪಸ್ಥಿತರಿದ್ದರು.

Previous Post
ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ, ಪಕ್ಷಕ್ಕೆ ಸ್ವಾಗತ ಎಂದ ಬಿಜೆಪಿ ನಾಯಕ
Next Post
ಎನ್ಡಿಎ ಅಧಿಕಾರಕ್ಕೆ ಬಂದರೆ ಹಜ್ ಯಾತ್ರೆಗೆ 1 ಲಕ್ಷ ರೂ.: ನಾಯ್ಡು

Recent News