ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ರಾಷ್ಟ್ರರಾಜಧಾನಿಯಲ್ಲಿನ ಶಾಲೆಗಳಲ್ಲಿ ಆತಂಕದ ವಾತಾವರಣ ಭಯಪಡುವ ಅಗತ್ಯ ಇಲ್ಲ ಎಂದ ಕೇಂದ್ರ ಗೃಹ ಇಲಾಖೆ

ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ರಾಷ್ಟ್ರರಾಜಧಾನಿಯಲ್ಲಿನ ಶಾಲೆಗಳಲ್ಲಿ ಆತಂಕದ ವಾತಾವರಣ ಭಯಪಡುವ ಅಗತ್ಯ ಇಲ್ಲ ಎಂದ ಕೇಂದ್ರ ಗೃಹ ಇಲಾಖೆ

ನವದೆಹಲಿ : ಬೆಂಗಳೂರು ಮಾದರಿಯಲ್ಲೇ ದೆಹಲಿಯಲ್ಲೂ ನೂರಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು ಬುಧವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಆತಂಕದ ವಾತವಾರಣ ನಿರ್ಮಾಣ ಮಾಡಿತು. ಬೆದರಿಕೆ ಬರುತ್ತಿದ್ದಂತೆ ಮಕ್ಕಳನ್ನು ತರಗತಿಗಳಿಂದ ಹೊರ‌ ಕಳುಹಿಸಿ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿವೆ.

ದೆಹಲಿ ಪೊಲೀಸರ ಪ್ರಕಾರ, ದೆಹಲಿ ಪಬ್ಲಿಕ್ ಸ್ಕೂಲ್‌ನ (ಡಿಪಿಎಸ್) ದ್ವಾರಕಾ ಮತ್ತು ವಸಂತ್ ಕುಂಜ್ ಘಟಕಗಳು, ಪೂರ್ವ ಮಯೂರ್ ವಿಹಾರ್‌ನ ಮದರ್ ಮ್ಯಾರಿ ಸ್ಕೂಲ್, ಸಂಸ್ಕೃತಿ ಶಾಲೆ, ಪುಷ್ಪ್ ವಿಹಾರ್‌ನ ಅಮಿಟಿ ಸ್ಕೂಲ್ ಮತ್ತು ನೈಋತ್ಯ ದೆಹಲಿಯ ಡಿಎವಿ ಶಾಲೆಗೆ ಅರಂಭದಲ್ಲಿ ಬಾಂಬ್ ಬೆದರಿಕೆ ಬಂದಿತ್ತು.‌ ಬಳಿಕ ನೊಯ್ಡಾದಲ್ಲಿರುವ ಡಿಪಿಎಸ್ ಸೇರಿ ಪ್ರಮುಖ ಶಾಲೆಗಳು ಸೇರಿದಂತೆ ಉತ್ತರ ಪ್ರದೇಶದಲ್ಲಿರುವ ಶಾಲೆಗಳನ್ನು ಗುರಿಯಾಗಿಸಿ ಇಮೇಲ್ ಮಾಡಲಾಗಿದೆ.

ದೂರು ಬರುತ್ತಿದ್ದಂತೆ ದೆಹಲಿ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ವಾಹನಗಳು ಮತ್ತು ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ಸ್ಥಳಕ್ಕೆ ಧಾವಿಸಿದವು. ಶಾಲೆಯ ಆವರಣದಲ್ಲಿ ಸಂಪೂರ್ಣ ಶೋಧ ನಡೆಸಲಾಗಿತ್ತಾದರೂ ಯಾವುದೇ ಅನುಮಾನಾಸ್ಪದವಾಗಿ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿಪಿಎಸ್ ನೋಯ್ಡಾದ ಪ್ರಾಂಶುಪಾಲರು‌ ಮಾತನಾಡಿ, ನೋಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಬೆದರಿಕೆ ಹಾಕುವ ಇಮೇಲ್ ಬಂದಿದೆ ಮುನ್ನೆಚ್ಚರಿಕೆ ಕ್ರಮವಾಗಿ ನಾವು ವಿದ್ಯಾರ್ಥಿಗಳನ್ನು ತಕ್ಷಣ ಮನೆಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದರು.

ಪ್ರಾಥಮಿಕ ತನಿಖೆಯ ಪ್ರಕಾರ ಬೆದರಿಕೆ ಕಳುಹಿಸಲಾದ ಇಮೇಲ್‌ಗಳ ಐಪಿ ವಿಳಾಸಗಳು ರಷ್ಯಾದಿಂದ ಬಂದಿವೆ ಎಂದು ತಿಳಿದು ಬಂದಿದೆ. ವಿಪಿಎನ್ ಮೂಲಕ ಐಪಿ ವಿಳಾಸವನ್ನು ಮರೆಮಾಚಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ, ಇನ್ನೂ ಯಾವುದೇ ಸಂಶಯಾಸ್ಪದ ಬೆಳವಣಿಗೆ ಪತ್ತೆಯಾಗಿಲ್ಲ, ಇಮೇಲ್ ಬಂದ ಐಪಿ ತನಿಖೆ ನಡೆಸಲಾಗುತ್ತಿದೆ ಎಂದು ಪೋಲಿಸ್ ಮೂಲಗಳು ಹೇಳಿವೆ.

ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಅಲರ್ಟ್ ಆಗಿದೆ. ಇದೊಂದು ಹುಸಿ ಬಾಂಬ್ ಬೆದರಿಕೆಯಾಗಿದ್ದು ಜನರು, ಪೊಷಕರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದಹ ಹೇಳಿದೆ. ಅದಾಗ್ಯೂ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕುತ್ತಿದ್ದು ಘಟನೆಯ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡ ಇದಿಯೇ ಎಂದು ಪರಿಶೀಒಲನೆ ನಡೆಸುತ್ತಿವೆ.

ಇಂದು ಬೆಳಿಗ್ಗೆ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಆ ಆವರಣಗಳನ್ನು ದೆಹಲಿ ಪೊಲೀಸರು ಶೋಧಿಸುತ್ತಿದ್ದಾರೆ. ಇದುವರೆಗೆ ಯಾವುದೇ ಶಾಲೆಗಳಲ್ಲಿ ಅನುಮಾನಸ್ಪದ ವಸ್ತುಗಳು ಕಂಡುಬಂದಿಲ್ಲ. ನಾವು ಪೊಲೀಸರು ಮತ್ತು ಶಾಲೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪೋಷಕರು ಮತ್ತು ನಾಗರಿಕರು ಭಯಪಡಬೇಡಿ ಎಂದು ಅತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ದೆಹಲಿ-ಎನ್‌ಸಿಆರ್‌ನ ಶಾಲೆಗಳಿಗೆ ಬಾಂಬ್ ಬೆದರಿಕೆಯ ಕುರಿತು ವಿವರವಾದ ವರದಿಯನ್ನು ಕೇಳಿದೆ. ಶಾಲಾ ಆವರಣದಲ್ಲಿ ಸಂಪೂರ್ಣ ಶೋಧನೆಯನ್ನು ಕೈಗೊಳ್ಳಲು, ಅಪರಾಧಿಗಳನ್ನು ಗುರುತಿಸಲು ಮತ್ತು ಯಾವುದೇ ಲೋಪವಾಗದಂತೆ ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Previous Post
ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ: ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ
Next Post
10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ

Recent News