ಮಣಿಪುರ ಸಂಘರ್ಷಕ್ಕೆ ವರ್ಷ: ಮೈತೈ, ಕುಕಿಗಳಿಂದ ಪ್ರತ್ಯೇಕ ಕಾರ್ಯಕ್ರಮ

ಮಣಿಪುರ ಸಂಘರ್ಷಕ್ಕೆ ವರ್ಷ: ಮೈತೈ, ಕುಕಿಗಳಿಂದ ಪ್ರತ್ಯೇಕ ಕಾರ್ಯಕ್ರಮ

ನವದೆಹಲಿ, ಮೇ. 2: ದೇಶವನ್ನೇ ತಲ್ಲಣಗೊಳಿಸಿದ್ದ ಮಣಿಪುರ ಜನಾಂಗೀಯ ಸಂಘರ್ಷಕ್ಕೆ ಒಂದು ವರ್ಷವಾಗಿದೆ. ಕಳೆದ 2023ರ ಮೇ.3ರಂದು ಮಣಿಪುರ ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಇದರ ನೆನಪಿಗಾಗಿ ಸಂಘರ್ಷದ ಭಾಗವಾಗಿದ್ದ ಕುಕಿ-ಜೋ ಮತ್ತು ಮೈತೈ ನಾಗರಿಕ ಸಮಾಜ ಸಂಘಟನೆಗಳು ಮೇ 3ರಂದು ಹಲವಾರು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಕುಕಿ ಗುಂಪುಗಳು ತಮ್ಮನ್ನು ಅಗಲಿದವರ ನೆನಪು ಮತ್ತು “ಜಾಗೃತಿ” ಗಾಗಿ ಮೇ.3ನ್ನು “ನೆನಪಿನ” ದಿನವನ್ನಾಗಿ ಆಚರಿಸಲು ನಿರ್ಧರಿಸಿದರೆ, ಮೈತೈ ಸಂಘಟನೆಗಳು ಮೇ.3ನ್ನು ‘ನಾರ್ಕೋ-ಭಯೋತ್ಪಾದಕರ ಬೆಂಬಲದೊಂದಿಗೆ ಅಕ್ರಮ ವಲಸಿಗರು ತಮ್ಮ ಆಕ್ರಮಣವನ್ನು ಪ್ರಾರಂಭಿಸಿದ ದಿನ’ ಎಂದು ಆಚರಿಸುವುದಾಗಿ ಹೇಳಿದ್ದಾರೆ.

ಮಣಿಪುರ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಿರ್ದೇಶಿಸಿದ ನಂತರ, ಕಣಿವೆ ಮೂಲದ ಮೈತೈ ಮತ್ತು ಗುಡ್ಡೆಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಕುಕಿ-ಜೋ ಬುಡಕಟ್ಟು ಗುಂಪುಗಳ ನಡುವೆ ಕಳೆದ ಮೇ.3ರಂದು ಘರ್ಷಣೆ ಪ್ರಾರಂಭವಾಗಿದೆ. ಸಂಘರ್ಷವು ಇಲ್ಲಿಯವರೆಗೆ 220ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ, ಸಾವಿರಾರು ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ, ಮಣಿಪುರ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಸಾವಿರಾರು ಮಂದಿ ಪರಿಹಾರ ಶಿಬಿರಗಳಲ್ಲಿ ನೆಲೆಸಿದ್ದಾರೆ. ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಘಟನೆ ವಿಶ್ವದ ಮುಂದೆ ಭಾರತವನ್ನು ತಲೆತಗ್ಗಿಸುವಂತೆ ಮಾಡಿತ್ತು. ಈಗಲೂ ಮಣಿಪುರದಲ್ಲಿ ಸರಿಯಾದ ಶಾಂತಿ ಸ್ಥಾಪನೆಯಾಗಿಲ್ಲ. ಮಣಿಪುರ ಸಂಘರ್ಷ ಭಾರತದ ಸದನದ ಒಳಗೆ ಮತ್ತು ಹೊರಗೆ ‘ಎನ್‌ಡಿಎ ಸರಕಾರದ ವಿರುದ್ಧ’ ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಗಿತ್ತು. ಮಣಿಪುರದ ಹಿಂಸಾಚಾರದ ವಿಚಾರದಲ್ಲಿ ಮಣಿಪುರ ಬಿಜೆಪಿ ಸರಕಾರದ ವೈಫಲ್ಯವನ್ನು ಸುಪ್ರೀಂಕೋರ್ಟ್‌ ಗಮನಿಸಿತ್ತು.

ಕುಕಿ ಬುಡಕಟ್ಟು ಸಂಸ್ಥೆಯಾದ ಚುರಾಚಂದ್‌ಪುರದಲ್ಲಿರುವ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಮೇ 3ರಂದು ಬಂದ್‌ಗೆ ಕರೆ ನೀಡಿದೆ. ಹಿಂಸಾಚಾರದ ಸ್ಮರಣಾರ್ಥ ಮತ್ತು ಒಗ್ಗಟ್ಟಿನ ಸಂಕೇತವಾಗಿ ಪ್ರತಿ ಮನೆಯ ಮೇಲೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮನವಿ ಮಾಡಿದೆ. ಎಲ್ಲಾ ವ್ಯಾಪಾರ ಸಂಸ್ಥೆಗಳು, ಉದ್ಯಮಗಳು, ಮಾರುಕಟ್ಟೆಗಳನ್ನು ಮೇ.3ರಂದು ಮುಚ್ಚುವಂತೆ ವಿನಂತಿಸಲಾಗಿದೆ, ಇದು ನಮ್ಮ ಮಡಿದ ವೀರರಿಗೆ ನೀಡುವ ಗೌರವದ ಸಂಕೇತವಾಗಿದೆ. ನಮ್ಮ ಏಕತೆಯನ್ನು ಪುನರುಚ್ಚರಿಸಲು ಮತ್ತು ಕುಕಿ-ಜೋ ಜನರ ಉಜ್ವಲ ಭವಿಷ್ಯದ ಕಡೆಗೆ ನಮ್ಮ ಸಂಕಲ್ಪವನ್ನು ಬಲಪಡಿಸಲು ನಾವು ಒಂದು ಸಮುದಾಯವಾಗಿ ಒಗ್ಗೂಡೋಣ ಎಂದು ಐಟಿಎಲ್‌ಎಫ್ ಹೇಳಿದೆ.

ಚುರಚಂದಪುರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಸ್ಮರಣೆ ಕಾರ್ಯಕ್ರಮವನ್ನು ನಡೆಸಲು ಕೂಡ ಐಟಿಎಫ್‌ ಮುಂದಾಗಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಪ್ರಾರ್ಥನೆಗಳು, ಭಾಷಣ ನಡೆಯಲಿದೆ. ಕಾಂಗ್‌ಪೊಕ್ಪಿ ಜಿಲ್ಲೆಯ ಕುಕಿ-ಜೋ ನಾಗರಿಕ ಸಮಾಜ ಸಂಘಟನೆಗಳು ಸಹ ಇದೇ ರೀತಿಯ ಕರೆಯನ್ನು ನೀಡಿವೆ. ಫೈಜಾಂಗ್‌ನಲ್ಲಿರುವ ಹುತಾತ್ಮರ ಸ್ಮಶಾನದಲ್ಲಿ ನಮ್ಮ ಮಡಿದವರನ್ನು ಗೌರವಿಸುವ ಕಾರ್ಯಕ್ರಮವಿರುತ್ತದೆ ಮತ್ತು ಸಂಜೆಯ ನಂತರ ನಾವು ಅವರಿಗಾಗಿ ಮೇಣದಬತ್ತಿಗಳನ್ನು ಬೆಳಗಿಸುತ್ತೇವೆ ಎಂದು ಕಾಂಗ್‌ಪೋಕ್ಪಿಯಲ್ಲಿರುವ ಕುಕಿ ಇನ್ಪಿ ಮಣಿಪುರದ (ಕೆಐಎಂ) ಜಂಗೌಲುನ್ ಹಾಕಿಪ್ ಹೇಳಿದರು. KIM ರಾಜ್ಯದ ಕುಕಿ ಬುಡಕಟ್ಟು ಜನಾಂಗದವರ ಉನ್ನತ ಸಂಸ್ಥೆಯಾಗಿದೆ. ಮಣಿಪುರ ರಾಜ್ಯ ಸರ್ಕಾರದ ಅಡಿಯಲ್ಲಿ ನಮ್ಮ ಜನರ ಮೇಲೆ ನಡೆದ ವ್ಯವಸ್ಥಿತ ಕಿರುಕುಳ ಮತ್ತು ದಬ್ಬಾಳಿಕೆಯ ಬಗ್ಗೆ ಕುಕಿ-ಜೋ ಜನರಿಗೆ ಉತ್ತಮ ಜಾಗೃತಿಯ ದಿನವಾಗಿ ಮೇ 3 ನೆನಪಿನಲ್ಲಿ ಉಳಿಯುತ್ತದೆ ಎಂದು KIM ಹೇಳಿಕೊಂಡಿದೆ. ಮೈತೈ ಗುಂಪುಗಳು ಇಂಫಾಲ್ ಪೂರ್ವದ ಶುಮಾಂಗ್ ಲೀಲಾ ಸಾಂಗ್ಲೆನ್‌ನಲ್ಲಿ ನೆನಪಿನ ಕಾರ್ಯಕ್ರಮವನ್ನು ಆಯೋಜಿಸಿದೆ. ಕಳೆದ ವರ್ಷ ಹಿಂಸಾಚಾರ ಭುಗಿಲೆದ್ದ ನಂತರ ನಾಪತ್ತೆಯಾಗಿರುವ 35 ಮೇತೈ ಜನರನ್ನು ಪತ್ತೆಹಚ್ಚಲು ಆಗ್ರಹಿಸುವುದಾಗಿ ಹೇಳಿದ್ದಾರೆ.

Previous Post
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ವಜಾ
Next Post
ಕೆಸಿಆರ್‌ಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ

Recent News