ಕೆಸಿಆರ್‌ಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ

ಕೆಸಿಆರ್‌ಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ

ಹೈದರಾಬಾದ್, ಮೇ. 2: ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ತೆಲಂಗಾಣ ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರಿಗೆ ಚುನಾವಣಾ ಆಯೋಗವು 48 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿಷೇಧ ವಿಧಿಸಿದೆ. ಭಾರತದ ಸಂವಿಧಾನದ 324 ನೇ ವಿಧಿ ಯಡಿಯಲ್ಲಿ, BRS ಅಧ್ಯಕ್ಷರಾದ ಕೆ. ಚಂದ್ರಶೇಖರ ರಾವ್ ಅವರು ಯಾವುದೇ ಸಾರ್ವಜನಿಕ ಸಭೆಗಳು, ಸಾರ್ವಜನಿಕ ಮೆರವಣಿಗೆಗಳು, ಸಾರ್ವಜನಿಕ ರ್ಯಾಲಿಗಳು, ಸಂದರ್ಶನಗಳು, ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಯಾವುದೇ ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಹೇಳಿಕೆಗಳನ್ನು ನೀಡದಂತೆ ನಿಷೇಧ ವಿಧಿಸಿದೆ. ಮೇ1 2024 ರಂದು ರಾತ್ರಿ 8ಗಂಟೆಯಿಂದ 48 ಗಂಟೆಗಳ ಕಾಲ ನಿಷೇಧ ವಿಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಏಪ್ರಿಲ್ 5 ರಂದು ಸಿರ್ಸಿಲ್ಲಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಸಿಆರ್ ಅವರು ಕಾಂಗ್ರೆಸ್ ನಾಯಕರನ್ನು ‘ನಾಯಿಯ ಮಕ್ಕಳು’ ಎಂದು ಉಲ್ಲೇಖಿಸಿದ್ದಲ್ಲದೆ ತೆಲಂಗಾಣ ಸರಕಾರದ ಬಗ್ಗೆ ಹಲವು ವಿವಾದಾತ್ಮಕ ಪದಗಳನ್ನು ಬಳಕೆ ಮಾಡಿದ್ದರು. ಏಪ್ರಿಲ್ 5ರಂದು ಸಿರಿಸಿಲ್ಲಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಸಿಆರ್, ಕಾಂಗ್ರೆಸ್ ಶಾಸಕರನ್ನು ಅವಹೇಳನ ಮಾಡಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಉಪಾಧ್ಯಕ್ಷ ಜಿ ನಿರಂಜನ್ ಏಪ್ರಿಲ್ 6ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಹೇಳಿದ್ದಾರೆ.
ಈ ಬಗ್ಗೆ ಪರಿಶೀಲಿಸಿದ ಚುನಾವಣಾ ಆಯೋಗ, ಈ ಅವಹೇಳನಕಾರಿ ಟೀಕೆಗಳು ವಿರೋಧ ಪಕ್ಷದ ಪ್ರತಿಷ್ಠೆಯನ್ನು ಹಾನಿಗೊಳಿಸಬಹುದು ಮತ್ತು ಪ್ರಸ್ತುತ ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆಗೆ ಅಡ್ಡಿಯಾಗಬಹುದು ಎಂದು ಕಂಡುಕೊಂಡಿದೆ. ಟೀಕೆಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಕೆಸಿಆರ್‌ಗೆ ಇಸಿಐನಿಂದ ಏಪ್ರಿಲ್ 18, 2024ರವರೆಗೆ ಕಾಲಾವಕಾಶ ನೀಡಲಾಗಿತ್ತು. ಚುನಾವಣಾ ಪ್ರಚಾರದ ಭಾಷಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹಲವು ಸೂಚನೆಗಳನ್ನು ನೀಡಿದ ನಂತರವೂ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದನ್ನು ಆಯೋಗ ಗಮನಿಸಿದೆ. ಕೆಸಿಆರ್ ಸರಿಯಾದ ಸಮಯಕ್ಕೆ ಸ್ಪಂದಿಸದಿದ್ದರೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಚುನಾವಣಾ ಪ್ರಾಧಿಕಾರ ಈ ಮೊದಲು ಹೇಳಿತ್ತು.

Previous Post
ಮಣಿಪುರ ಸಂಘರ್ಷಕ್ಕೆ ವರ್ಷ: ಮೈತೈ, ಕುಕಿಗಳಿಂದ ಪ್ರತ್ಯೇಕ ಕಾರ್ಯಕ್ರಮ
Next Post
ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆ ವಿವರಿಸಿ ಪತ್ರ ಬರೆದ ಖರ್ಗೆ

Recent News