ಬೋಧಕ, ಬೋಧಕೇತರ ನೇಮಕಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ

ಬೋಧಕ, ಬೋಧಕೇತರ ನೇಮಕಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ : ಪಶ್ಚಿಮ ಬಂಗಾಳದ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ನೇಮಕವಾಗಿದ್ದ 25,753 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದಾಗ್ಯೂ, ಹಗರಣದ ತನಿಖೆಯನ್ನು ಮುಂದುವರಿಸಲು ಸಿಬಿಐಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಅಭ್ಯರ್ಥಿಗಳು ಅಥವಾ ಸರ್ಕಾರಿ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸೂಚಿಸಿದೆ.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ಪ್ರಕರಣದ ತ್ವರಿತ ವಿಚಾರಣೆಗೆ ಕರೆ ನಡೆಸಬೇಕು ಎಂದಯ ಸೂಚಿಸಿ, ಜುಲೈ 16 ಕ್ಕೆ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ನೇಮಕಾತಿ ಪ್ರಕರಣವನ್ನು “ವ್ಯವಸ್ಥಿತ ವಂಚನೆ” ಎಂದು ಕರೆದ ಕೋರ್ಟ್, ನೇಮಕಾತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಅವಿವೇಕ ಎಂದು ಹೇಳಿದೆ. ಮಾನ್ಯ ಮತ್ತು ಅಮಾನ್ಯ ನೇಮಕಾತಿಗಳನ್ನು ಪ್ರತ್ಯೇಕಿಸುವ ಅವಶ್ಯಕತೆಯಿದೆ ಇದಕ್ಕೆ ವಿಧಾನಗಳನ್ನು ನಿರ್ಧರಿಸಲು ಸಲಹೆ ನೀಡುವಂತೆ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.

ಇದೇ ವೇಳೆ ನೇಮಕಾತಿ ಅಸಿಂಧು ಎಂದು ಕಂಡುಬಂದ ಅಭ್ಯರ್ಥಿಗಳು ಮಾತ್ರ ವೇತನವನ್ನು ಮರುಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಭ್ಯರ್ಥಿಗಳು ಅಥವಾ ಬಂಗಾಳ ಸರ್ಕಾರದ ಅಧಿಕಾರಿಗಳ ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ತೆಗೆದುಕೊಳ್ಳದಂತೆ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿದ್ದರೂ ಸಹ, ಶಾರ್ಟ್‌ಲಿಸ್ಟ್ ಮಾಡದೆ ನೇಮಕಗೊಂಡ ಎಲ್ಲ ಅಭ್ಯರ್ಥಿಗಳ ತನಿಖೆಯನ್ನು ಮುಂದುವರಿಸಲು ಸುಪ್ರೀಂಕೋರ್ಟ್ ಹೇಳಿದೆ.

ಕಲ್ಕತ್ತಾ ಹೈಕೋರ್ಟ್ ಎಲ್ಲಾ 25,000 ಶಿಕ್ಷಕರು ಮತ್ತು ಉದ್ಯೋಗಿಗಳ ನೇಮಕಾತಿ ರದ್ದು ಮಾಡಿ 12 ಪ್ರತಿಶತದಷ್ಟು ವಾರ್ಷಿಕ ಬಡ್ಡಿಯೊಂದಿಗೆ ಡ್ರಾ ಮಾಡಿದ ಸಂಪೂರ್ಣ ಸಂಬಳವನ್ನು ಹಿಂದಿರುಗಿಸುವಂತೆ ನಿರ್ದೇಶಿಸಿತ್ತು. ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

Previous Post
ಪುಷ್ಪ ಸಿನಿಮಾದಿಂದ ವೃತ್ತಿ ಬದುಕಿನಲ್ಲಿ ಬದಲಾವಣೆಯಾಗಲಿಲ್ಲ : ಫಾಸಿಲ್
Next Post
ಕೇಜ್ರಿವಾಲ್ ಗೆ ಜಾಮೀನು ನೀಡುವ ಸುಳಿವು ನೀಡಿದ ಸುಪ್ರೀಂಕೋರ್ಟ್

Recent News