ರಫಾದಲ್ಲಿ ಇಸ್ರೇಲ್ ದಾಳಿ: ಭಾರತ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು
ಮಾಸ್ಕೋ, ಮೇ 14: ಗಾಝಾ ಪಟ್ಟಿಯ ರಫಾದಲ್ಲಿ ವಾಹನದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆ (ಡಿಎಸ್ಎಸ್)ಗಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಸೇನೆಯ ಮಾಜಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಸೋಮವಾರ ರಫಾದ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ವಾಹನದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಡಿಎಸ್‌ಎಸ್‌ನ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ (ಯುಎನ್) ಮಂಗಳವಾರ ದೃಢಪಡಿಸಿದೆ. ಸಿಬ್ಬಂದಿ ಮೇಲಿನ ದಾಳಿಯನ್ನು ಖಂಡಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತನಿಖೆಗೆ ಆಗ್ರಹಿಸಿದ್ದಾರೆ.
ಮೃತ ಡಿಎಸ್‌ಎಸ್ ಸಿಬ್ಬಂದಿಯ ಗುರುತು ಬಹಿರಂಗವಾಗಿಲ್ಲ. ಆದರೆ, ಅವರು ಭಾರತೀಯ ಸೇನೆಯ ಮಾಜಿ ಪದಾತಿ ದಳದ ಅಧಿಕಾರಿ ಎಂದು ವರದಿಗಳು ಹೇಳಿವೆ. ಮೃತ ಅಧಿಕಾರಿ ಭಾರತದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, 2000 ಇಸವಿಯಲ್ಲಿ ಭಾರತೀಯ ಸೇನೆಗೆ ಸೇರಿದ್ದ ಅವರು ಕೆಲ ವರ್ಷಗಳ ಹಿಂದೆ ಅಕಾಲಿಕ ನಿವೃತ್ತಿ ಪಡೆದುಕೊಂಡಿದ್ದರು. ಇತ್ತೀಚೆಗಷ್ಟೇ ಅವರು ಡಿಎಸ್‌ಎಸ್‌ಗಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.
ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಉಪ ವಕ್ತಾರ ಫರ್ಹಾನ್ ಹಕ್, ವಿಶ್ವಸಂಸ್ಥೆ ಘಟನೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದಿದ್ದಾರೆ. ಕೊಲ್ಲಲ್ಪಟ್ಟವರು ಅಂತಾರಾಷ್ಟ್ರೀಯ ಎಂಬುವುದನ್ನು ಅವರು ದೃಢಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಭಾರತೀಯ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿಲ್ಲ.