ಎಲ್ಗರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾಗೆ ಜಾಮೀನು

ಎಲ್ಗರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾಗೆ ಜಾಮೀನು

ನವದೆಹಲಿ, ಮೇ 14: ಎಲ್ಗರ್ ಪರಿಷತ್-ಮಾವೋವಾದಿ ನಂಟು ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಗೃಹ ಬಂಧನದ ಭದ್ರತೆ ವೆಚ್ಚ 20 ಲಕ್ಷ ರೂಪಾಯಿ ಪಾವತಿಸುವಂತೆ ನವ್ಲಾಖಾ ಅವರಿಗೆ ನಿರ್ದೇಶನ ನೀಡಿದೆ. ನವ್ಲಾಖಾ ಅವರಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ.ಎಂ ಸುಂದ್ರೇಶ್ ಮತ್ತು ಎಸ್‌.ವಿ.ಎನ್ ಭಟ್ಟಿ ಅವರ ಪೀಠ ವಿಚಾರಣೆ ನಡೆಸುತ್ತಿದೆ.

ಜನವರಿ 1, 2018 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ ಆರೋಪದ ಮೇಲೆ ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ನವ್ಲಾಖಾ ಅವರನ್ನು ಏಪ್ರಿಲ್ 14, 2020 ರಂದು ಎನ್‌ಐಎ ಬಂಧಿಸಿತ್ತು. ಅನಾರೋಗ್ಯದ ಕಾರಣ, ನವೆಂಬರ್ 2022ರಲ್ಲಿ ಸುಪ್ರೀಂ ಕೋರ್ಟ್ ನವ್ಲಾಖಾ ಅವರ ಗೃಹ ಬಂಧನಕ್ಕೆ ಆದೇಶಿಸಿತ್ತು.

ಯುಎಪಿಎ ಸೆಕ್ಷನ್ 15ರ ಅಡಿಯಲ್ಲಿ ನವ್ಲಾಖಾ ಅವರು ಭಯೋತ್ಪಾದಕ ಕೃತ್ಯ ಎಸಗಿದ್ದಾರೆ ಎಂದು ದೃಢೀಕರಿಸಲು ಯಾವುದೇ ಸಾಕ್ಷ್ಯ ಇಲ್ಲ ಎಂದು ಗಮನಿಸಿದ್ದ ನ್ಯಾಯಮೂರ್ತಿಗಳಾದ ಎ.ಎಸ್ ಗಡ್ಕರಿ ಮತ್ತು ಶಿವಕುಮಾರ್ ಅವರ ಬಾಂಬೆ ಹೈಕೋರ್ಟ್ ಪೀಠ ಕಳೆದ ಡಿಸೆಂಬರ್‌ನಲ್ಲಿ ನವ್ಲಾಖಾ ಅವರಿಗೆ ಜಾಮೀನು ನೀಡಿತ್ತು. ಆದರೆ, ಎನ್‌ಐಎ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಕಾಲಾವಕಾಶ ಕೋರಿದ ಹಿನ್ನೆಲೆ, ಹೈಕೋರ್ಟ್ ತನ್ನ ಆದೇಶವನ್ನು 3 ವಾರಗಳ ಕಾಲ ತಡೆಹಿಡಿದಿತ್ತು. ಬಳಿಕ ತಡೆಯನ್ನು ಹಲವು ಬಾರಿ ವಿಸ್ತರಿಸಿತ್ತು.

ನವ್ಲಾಖಾ ನಾಲ್ಕು ವರ್ಷಗಳಿಗೂ ಹೆಚ್ಚು ಸಮಯದಿಂದ ಸೆರೆವಾಸದಲ್ಲಿದ್ದಾರೆ. ವಿಚಾರಣೆ ಪೂರ್ಣಗೊಳ್ಳಲು ಇನ್ನೂ ಹಲವು ವರ್ಷಗಳೇ ತೆಗೆದುಕೊಳ್ಳಬಹುದು. ಅಲ್ಲದೆ, ನವ್ಲಾಖಾ ಅವರು ಭಯೋತ್ಪಾದಕ ಕೃತ್ಯ ಎಸಗಿದ್ದಾರೆ ಎಂದು ದೃಢೀಕರಿಸಲು ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂಬ ಅಂಶಗಳನ್ನು ಗಮನಿಸಿದ ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ ಜಾಮೀನಿಗೆ ನೀಡಿದ್ದ ಮಧ್ಯಂತರ ತಡೆಯನ್ನು ತೆಗೆದು ಹಾಕಿದೆ.

Previous Post
ರಫಾದಲ್ಲಿ ಇಸ್ರೇಲ್ ದಾಳಿ: ಭಾರತ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು
Next Post
ಕೋವಿಡ್ ಲಸಿಕೆ ಅಡ್ಡಪರಿಣಾಮ: ಮೋದಿ ಸೇರಿ 28 ಮಂದಿ ವಿರುದ್ಧ ದೂರು

Recent News