ಸಿಎಎ ಅಡಿ 14 ಮಂದಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ವಿತರಣೆ

ಸಿಎಎ ಅಡಿ 14 ಮಂದಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ವಿತರಣೆ

ನವದೆಹಲಿ, ಮೇ 15: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಡಿ ಮೊದಲ ಹಂತದಲ್ಲಿ 14 ಜನರಿಗೆ ಕೇಂದ್ರ ಗೃಹ ಸಚಿವಾಲಯ ಬುಧವಾರ (ಮೇ 15) ಪ್ರಮಾಣ ಪತ್ರ ವಿತರಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ 14 ಜನರಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಪ್ರಮಾಣ ಪತ್ರ ನೀಡಿದ್ದಾರೆ.
ಸಿಎಎ ಅಡಿ ಡಿಸೆಂಬರ್ 31, 2014ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಅರ್ಜಿಯ ಅರ್ಹತೆಯ ಅವಧಿಯನ್ನು 11 ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ.

ಭಾರದ ಪೌರತ್ವ ಕಾಯ್ದೆಗೆ 2019ರಲ್ಲಿ ತಿದ್ದುಪಡಿ ತಂದಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಿತ್ತು. ಪ್ರತಿಪಕ್ಷಗಳ ವಿರೋಧದ ನಡುವೆ ಸಂಸತ್‌ನಲ್ಲಿ ಅಂಗೀಕಾರಗೊಂಡ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಇದಾಗಿ ನಾಲ್ಕು ವರ್ಷಗಳ ಬಳಿಕ 2024ರ ಮಾರ್ಚ್‌ 11 ರಂದು ಸಿಎಎ ಜಾರಿ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆ ಬಳಿಕ ಅರ್ಜಿ ಸಲ್ಲಿಸಿದವರಿಗೆ ಮೊದಲ ಹಂತದಲ್ಲಿ ಭಾರತೀಯ ಪೌರತ್ವ ಪ್ರಮಾಣ ಪತ್ರ ವಿತರಿಸಲಾಗಿದೆ.

ಸಿಎಎ ಧರ್ಮದ ಆಧಾರದಲ್ಲಿ ಭಾರತೀಯ ಪೌರತ್ವ ನೀಡುವುದರಿಂದ ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಚುನಾವಣೆ ಹೊಸ್ತಿಲಲ್ಲೇ ಕೇಂದ್ರ ಸರ್ಕಾರ ಸಿಎಎ ಅಧಿಸೂಚನೆ ಹೊರಡಿಸುವ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ. ಆದರೆ ಕೇಂದ್ರ ಸರ್ಕಾರ, ಈ ಹಿಂದೆ ಪೌರತ್ವ ಪಡೆಯಲು ಇದ್ದ ಕಾನೂನು ಈಗಲೂ ಜಾರಿಯಲ್ಲಿದೆ. ಅದರ ಮೂಲಕ ಮುಸ್ಲಿಮರು ಪೌರತ್ವ ಪಡೆಯುವುದನ್ನು ಸಿಎಎ ತಡೆಯುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ. 2019ರಲ್ಲಿ ಸಂಸತ್‌ನಲ್ಲಿ ಸಿಎಎ ಮಸೂದೆ ಅಂಗೀಕಾರಗೊಂಡಾಗ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಸಿಎಎ ಭಾರತೀಯ ಮುಸ್ಲಿಮರ ಪೌರತ್ವ ಕಸಿದುಕೊಳ್ಳುವ ಹುನ್ನಾರದ ಭಾಗ ಎಂದು ದೇಶದಾದ್ಯಂತ ಆಕ್ರೋಶ ವ್ಯಕ್ತವವಾಗಿತ್ತು. ಆದರೆ, ಕೇಂದ್ರ ಸರ್ಕಾರ ಸಿಎಎ ಯಾವುದೇ ಭಾರತೀಯ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುವುದಿಲ್ಲ ಎಂದು ಹೇಳಿಕೊಂಡು ಬಂದಿದೆ.

Previous Post
ಪ್ರಬೀರ್ ಪುರಕಾಯಸ್ಥ ಬಂಧನ ಅಸಿಂಧು: ತಕ್ಷಣ ಬಿಡುಗಡೆಗೆ ಸುಪ್ರೀಂ ಆದೇಶ
Next Post
ಇಂಟರ್ನೆಟ್ ಸ್ಥಗಿತ: ಸತತ 6ನೇ ಬಾರಿಗೆ ಭಾರತಕ್ಕೆ ಅಗ್ರಸ್ಥಾನ

Recent News