ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಬೆಂಬಲಿಗರ ನಡುವೆ ಘರ್ಷಣೆ: 1 ಸಾವು ಹಲವರಿಗೆ ಗಾಯ
ಭುವನೇಶ್ವರ, ಮೇ 16: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಬಿಜು ಜನತಾದಳ (ಬಿಜೆಡಿ) ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಓರ್ವ ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತರನ್ನು ಶ್ರೀ ಕೃಷ್ಣ ಶರಣಾಪುರ ಗ್ರಾಮದ ನಿವಾಸಿ ದಿಲೀಪ್ ಕುಮಾರ್ ಪಹಾನ (28) ಎಂದು ಗುರುತಿಸಲಾಗಿದೆ. ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್ ಕುಮಾರ್ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಪೋಸ್ಟರ್ ಅಳವಡಿಕೆ ವೇಳೆ ಕಲ್ಲಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಕೃಷ್ಣ ಶರಣಾಪುರ ಗ್ರಾಮದಲ್ಲಿ ಘರ್ಷಣೆ ಸಂಭವಿಸಿದೆ. ಬಿಜೆಡಿ ಮತ್ತು ಬಿಜೆಪಿ ಬೆಂಬಲಿಗರು ಹರಿತವಾದ ಆಯುಧಗಳನ್ನು ಬಳಸಿ ಹೊಡೆದಾಟ ನಡೆಸಿದ್ದಾರೆ. ಗಾಯಗೊಂಡವರು ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ.
ಬಿಜೆಪಿ ಕಾರ್ಯಕರ್ತನ ಸಾವಿನ ಬೆನ್ನಲ್ಲಿ ಬಿಜೆಪಿ ಬೆಂಬಲಿಗರು ಬಿಜೆಡಿ ಅಭ್ಯರ್ಥಿ ಹಾಗೂ ಕಲ್ಲಿಕೋಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸೂರ್ಯಮಣಿ ಬೈದ್ಯ ಅವರ ನಿವಾಸದ ಬಳಿ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಹಾನಿಗೊಳಿಸಿದ್ದಾರೆ. ಪೊಲೀಸ್ ಠಾಣೆ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಘಟನೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಖಂಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕಲ್ಲಿಕೋಟೆ ಪ್ರದೇಶದಲ್ಲಿ ನಡೆದ ಅತ್ಯಂತ ದುರದೃಷ್ಟಕರ ಮತ್ತು ದುರಂತ ಹಿಂಸಾಚಾರದ ಘಟನೆಯಿಂದ ತೀವ್ರವಾಗಿ ದುಃಖಿತನಾಗಿದ್ದೇನೆ. ಇಂತಹ ಹಿಂಸಾಚಾರದ ಘಟನೆಗಳಿಗೆ ನಮ್ಮ ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಈ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬದ ಸದಸ್ಯರಿಗೆ ನನ್ನ ಆಳವಾದ ಸಂತಾಪಗಳು ಮತ್ತು ಗಾಯಗಳಿಗೆ ಒಳಗಾದವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ. ಘಟನೆ ಬಗ್ಗೆ ಪೊಲೀಸರು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಘರ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಇಂತಹ ಘಟನೆಗಳು ಸಂಭವಿಸಬಾರದು ಎಂದು ಹೇಳಿದ್ದಾರೆ. ಕಲ್ಲಿಕೋಟೆ ಕ್ಷೇತ್ರದಿಂದ ಶಾಸಕ ಸೂರ್ಯಮಣಿ ಬೈದ್ಯ ಪುನರಾಯ್ಕೆ ಬಯಸುತ್ತಿದ್ದರೆ, ಬಿಜೆಪಿಯು ಕ್ಷೇತ್ರದಲ್ಲಿ ಮಾಜಿ ಶಾಸಕ ಪೂರ್ಣಚಂದ್ರ ಸೇಠಿ ಅವರನ್ನು ಕಣಕ್ಕಿಳಿಸಿದೆ. ಕಲ್ಲಿಕೋಟೆಯಲ್ಲಿ ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಮೇ.20ರಂದು ನಿಗದಿಯಾಗಿದೆ.
ಒಡಿಶಾದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನಿಕುಂಜ ಬಿಹಾರಿ ಧಾಲ್ ಅವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಕ್ಷಣವೇ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಚುನಾವಣಾ ಹಿಂಸಾಚಾರವನ್ನು ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.