ಹೆಲಿಕಾಪ್ಟರ್‌ ಪತನ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

ಹೆಲಿಕಾಪ್ಟರ್‌ ಪತನ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

ಟೆಹ್ರಾನ್: ಭಾನುವಾರ ಪತನಗೊಂಡಿದ್ದ ಹೆಲಿಕಾಪ್ಟರ್‌ನಲ್ಲಿದ್ದ ಅಧ್ಯಕ್ಷ ಇಬ್ರಾಹಿಂ ರೈಸಿ ಸಹಿತ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್‌ ಮಾಧ್ಯಮಗಳು ವರದಿ ಮಾಡಿವೆ. ಈ ದುರ್ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇರಾನ್‍ನ ವಾಯುವ್ಯ ಪರ್ವತ ಪ್ರದೇಶದ ಜೋಲ್ಫಾದಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಸ್ಥಳವನ್ನು ಮಾನವರಹಿತ ವಿಮಾನ (ಯುಎವಿ) ಗುರುತಿಸಿದೆ ಎಂದು ಟರ್ಕಿಯ ಸರ್ಕಾರಿ ಸುದ್ದಿ ಸಂಸ್ಥೆ ಅನಾಡೊಲು ವರದಿ ಮಾಡಿದೆ.

ಪರ್ವತ ಶ್ರೇಣಿಗಳ ನಡುವೆ ಇಬ್ರಾಹಿಂ ರೈಸಿ ಹಾಗೂ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪ್ಯರಿತ್ಯದಿಂದ ಭಾನುವಾರ ಸಂಜೆ (ಮೆ 19) ಪತನಗೊಂಡಿತ್ತು. ಹೆಲಿಕಾಪ್ಟರ್ ಹಾರಾಟದ ಸುಮಾರು 30 ನಿಮಿಷಗಳ ನಂತರ ಸಂಪರ್ಕವನ್ನು ಕಳೆದುಕೊಂಡಿತ್ತು. ಇಬ್ರಾಹಿಂ ರೈಸಿ ಮತ್ತು ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಗಡಿಭಾಗದಲ್ಲಿ ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿ ಇರಾನಿನ ನಗರ ತಬ್ರಿಜ್‍ಗೆ ಹಿಂದಿರುಗುವ ಈ ಘಟನೆ ಸಂಭವಿಸಿತ್ತು.

ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೊಸ್ಟ್ ಮಾಡಿರುವ ಪ್ರಧಾನಿ ಮೋದಿ ಇರಾನ್‍ನ ಅಧ್ಯಕ್ಷ ಡಾ. ಸೈಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಇರಾನ್‍ನ ಜನರು ಈ ದುಃಖದ ಸಮಯದಲ್ಲಿ ಇರಾನ್‍ನೊಂದಿಗೆ ನಿಂತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Previous Post
ಇರಾನ್ ಅಧ್ಯಕ್ಷ ರೈಸಿ ಕಾಪ್ಟರ್ ಪತನದ ಹಿಂದಿದೆಯಾ ಇಸ್ರೇಲ್?
Next Post
G20 ದೇಶಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದರೂ ಬಡ ರಾಷ್ಟ್ರವಾಗಿದೆ – ರಘುರಾಮ್ ರಾಜನ್

Recent News