ದಕ್ಷಿಣ ಎಲ್ಲೇಡೆ ಮಳೆಯ ಅಬ್ಬರ, ಉತ್ತರ ಭಾರತದಲ್ಲಿ ನೆತ್ತಿ ಸುಡುತ್ತಿರುವ ಬಿಸಿಲು

ದಕ್ಷಿಣ ಎಲ್ಲೇಡೆ ಮಳೆಯ ಅಬ್ಬರ, ಉತ್ತರ ಭಾರತದಲ್ಲಿ ನೆತ್ತಿ ಸುಡುತ್ತಿರುವ ಬಿಸಿಲು

ನವದೆಹಲಿ : ದಕ್ಷಿಣ ಭಾರತದಲ್ಲಿ ಎಲ್ಲೇಡೆ ಮಳೆಯ ಅಬ್ಬರ ಹೆಚ್ಚುತ್ತಿದ್ದರೆ ಉತ್ತರ ಭಾರತದಲ್ಲಿ ಸೂರ್ಯನ ಶಾಖ ನೆತ್ತಿ ಸುಡುತ್ತಿದೆ. ಮುಂದಿನ ಐದು ದಿನಗಳ ಕಾಲ ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ಭಾರಿ ಬಿಸಲು ಕಂಡು ಬರಲಿದ್ದು ಗರಿಷ್ಠ ಉಷ್ಣಾಂಶ ತಲುಪಲಿದೆ ಎಂದು ಭಾರತೀಯ ಹವಮಾನ ಇಲಾಖೆ ಎಚ್ಚರಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು ಮೇ ತಿಂಗಳಲ್ಲಿ ಇದು ಗರಿಷ್ಠ ತಾಪಮಾನವಾಗಿದೆ. ದೆಹಲಿಯ ನಜಾಫ್‌ಗಢ್ ಪ್ರದೇಶದಲ್ಲಿ 47.7 ಡಿಗ್ರಿ ತಾಪಮಾನ ವರದಿಯಾಗಿದ್ದು ಜನರನ್ನು ಹೈರಾಣಾಗಿಸಿದೆ. ಇದರ ಜೊತೆಗೆ ಮಂಗಳವಾರದಿಂದ ಶುಕ್ರವಾರದವರೆಗೆ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ತೀವ್ರವಾದ ಶಾಖದ ವಾತಾವರಣ ಇರಲಿದೆ.

ಈ ವಾರ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಮತ್ತು ಗುಡ್ಡಗಾಡು ರಾಜ್ಯಗಳಾದ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಪರಿಸ್ಥಿತಿಗಳನ್ನು ಅಂದಾಜಿಸಿದೆ.

ರಾಜಸ್ಥಾನದ ಶ್ರೀಗಂಗಾನಗರ ಮತ್ತು ಅಂತಾದಲ್ಲಿ 46.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದರೆ, ಹರಿಯಾಣದಲ್ಲಿ ನುಹ್ ಅತಿ ಹೆಚ್ಚು ಉಷ್ಣಾಂಶ 47.2 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ಪಂಜಾಬ್ ಮತ್ತು ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ ಗರಿಷ್ಠ 44.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಫರೀದ್‌ಕೋಟ್ ಪಂಜಾಬ್‌ನಲ್ಲಿ 44 ಡಿಗ್ರಿ ಸೆಲ್ಸಿಯಸ್‌ನಲ್ಲಿ ಅತಿ ಹೆಚ್ಚು ಉಷ್ಣಾಂಶವನ್ನು ಹೊಂದಿದ್ದು, 43.9 ಡಿಗ್ರಿಗಳೊಂದಿಗೆ ಅಮೃತಸರ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದ ದಾತಿಯಾದಲ್ಲಿ 47.5 ಡಿಗ್ರಿ, ಉತ್ತರ ಪ್ರದೇಶದ ಆಗ್ರಾದಲ್ಲಿ 47.7 ಡಿಗ್ರಿ ಮತ್ತು ಝಾನ್ಸಿಯಲ್ಲಿ 47.2 ಡಿಗ್ರಿ ದಾಖಲಾಗಿದೆ.

ಬಿರುಸಿನ ಶಾಖದ ಹಿನ್ನೆಲೆಯಲ್ಲಿ IMD ಕಳವಳ ವ್ಯಕ್ತಪಡಿಸಿದೆ. ಬಿಸಿಗಾಳಿ ಪೀಡಿತ ಪ್ರದೇಶಗಳಲ್ಲಿ ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಲು, ತಲೆಯನ್ನು ರಕ್ಷಿಸಲು ಟೋಪಿಗಳು ಮತ್ತು ಛತ್ರಿಗಳನ್ನು ಬಳಸುವಂತೆ ತಿಳಿಸಿದೆ. ಎಲ್ಲಾ ವಯಸ್ಸಿನ ಜನರಲ್ಲಿ ಹೀಟ್ ಸ್ಟ್ರೋಕ್‌ನ ಹೆಚ್ಚಿನ ಸಂಭವನೀಯತೆ ಇದ್ದು ಶಿಶುಗಳು, ವೃದ್ಧರು ಆರೋಗ್ಯ ಕಾಳಜಿವಹಿಸಲು ಹೇಳಿದೆ.

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆಯಾಗಲಿದೆ ಎಂದು ಅದು ಹೇಳಿದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮುಂದಿನ ಏಳು ದಿನಗಳವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

Previous Post
G20 ದೇಶಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದರೂ ಬಡ ರಾಷ್ಟ್ರವಾಗಿದೆ – ರಘುರಾಮ್ ರಾಜನ್
Next Post
ನೀತಿ ಸಂಹಿತೆ ಉಲ್ಲಂಘನೆ ಬಿಜೆಪಿ ವಿರುದ್ಧ ಕ್ರಮಕೈಗೊಳ್ಳದ ಚು. ಆಯೋಗದ ವಿರುದ್ಧ ಹೈಕೋರ್ಟ್ ಚಾಟೀ

Recent News