ಅಧಿಕಾರಕ್ಕೆ ಬಂದ್ರೆ ಜುಲೈ 5ಕ್ಕೆ ಕೋಟ್ಯಂತರ ಮಹಿಳೆಯರ ಖಾತೆಗೆ 8,500 ರೂ. ಜಮೆ: ರಾಹುಲ್ ಗಾಂಧಿ
ಶಿಮ್ಲಾ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜುಲೈ 5 ರಂದು ದೇಶದ ಕೋಟ್ಯಂತರ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 8,500 ರೂ. ಜಮಾ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ 20-25 ಕೋಟ್ಯಧಿಪತಿಗಳಿಗೆ ಕೋಟ್ಯಂತರ ರೂ. ಹಣವನ್ನು ನೀಡಿದೆ. ಶ್ರೀಮಂತರನ್ನು ಮಾತ್ರವೇ ಅವರು ಬೆಳೆಸಿದ್ದಾರೆ. ನರೇಂದ್ರ ಮೋದಿ ಇರೋವರೆಗೂ ಅದಾನಿ ಅವರ ವ್ಯವಹಾರ ಆಕಾಶಕ್ಕೆ ಏರುತ್ತದೆ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಮುಂದೆ ನಮಗೂ ಕಾಲ ಬಂದಾಗ ನಾವು ಕೂಡಾ ಕೋಟ್ಯಂತರ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದೇಶದಲ್ಲಿರುವ ಎಲ್ಲಾ ಬಡವರ ಪಟ್ಟಿಯನ್ನು ತಯಾರಿಸಲಾಗುತ್ತದೆ. ಅದರಲ್ಲಿ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಯ ಹೆಸರನ್ನು ಆಯ್ಕೆ ಮಾಡಾಗುತ್ತದೆ. ಜುಲೈ 5 ರಂದು ಆ ಕೋಟ್ಯಂತರ ಮಹಿಳೆಯರ ಖಾತೆಗೆ 8,500 ರೂ. ಜಮೆಯಾಗುತ್ತದೆ. ಇದು ಜುಲೈನಿಂದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ಹೀಗೆ ಪ್ರತಿ ತಿಂಗಳು ಠಕಾ ಠಕ್, ಠಕಾ ಠಕ್ ಎಂದು ಮುಂದುವರಿಯುತ್ತದೆ ಎಂದರು. ಇಂಡಿಯಾ ಮೈತ್ರಿಕೂಟದ ಸರ್ಕಾರ ಬಡ ಮಹಿಳೆಯರ ಖಾತೆಗೆ ಹಣ ಹಾಕಿ ಅವರ ಅಭ್ಯಾಸವನ್ನು ಹಾಳುಮಾಡಿದ್ದಾರೆ ಎಂದು ಮುಂದೆ ಮಾಧ್ಯಮದವರು ಹೇಳಿದರೆ, ನಾವು ಅವರ ಖಾತೆಗೆ ಹಾಕುವ ಹಣವನ್ನು ದ್ವಿಗುಣ ಮಾಡುತ್ತೇವೆ ಎಂದು ರಾಹುಲ್ ಹೇಳಿದ್ದಾರೆ.