ದೇವರಾಗಿದ್ದರೆ ರಾಜಕೀಯ ಮಾಡಬಾರದು: ಮೋದಿಗೆ ಮಮತಾ ಬ್ಯಾನರ್ಜಿ ಟಾಂಗ್‌

ದೇವರಾಗಿದ್ದರೆ ರಾಜಕೀಯ ಮಾಡಬಾರದು: ಮೋದಿಗೆ ಮಮತಾ ಬ್ಯಾನರ್ಜಿ ಟಾಂಗ್

ಕೋಲ್ಕತ್ತಾ, ಮೇ 29: ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ’ ಎಂಬ ಪ್ರಧಾನಿ ಮೋದಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೇವರುಗಳು ರಾಜಕೀಯ ಮಾಡಬಾರದು ಮತ್ತು ಗಲಭೆಗಳನ್ನು ಪ್ರಚೋದಿಸಬಾರದು, ನಾವು ದೇವಾಲಯ ಕಟ್ಟಿಸಿ ಕೊಡುತ್ತೇವೆ ಅಲ್ಲಿರಬೇಕು ಎಂದು ಪ್ರಧಾನಿ ಮೋದಿಗೆ ಟಾಂಗ್‌ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಮೋದಿಯವರು ತಮ್ಮನ್ನು ತಾವು ದೇವರೆಂದು ಪರಿಗಣಿಸಿದ್ದರೆ, ಅವರಿಗೆ ದೇವಾಲಯವನ್ನು ನಿರ್ಮಿಸಬೇಕು, ಅಲ್ಲಿ ಕುಳಿತುಕೊಳ್ಳಬೇಕು ಮತ್ತು ದೇಶವನ್ನು ತೊಂದರೆಗೊಳಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ದೇವರುಗಳ ದೇವರು ಎಂದು ಒಬ್ಬರು ಹೇಳುತ್ತಾರೆ, ಮತ್ತೊಬ್ಬ ‘ಜಗನ್ನಾಥ ‘ ಮೋದಿಯ ಭಕ್ತ ಎಂದು ಹೇಳುತ್ತಾರೆ. ಅವರು ದೇವರಾಗಿದ್ದರೆ ಅವರು ರಾಜಕೀಯ ಮಾಡಬಾರದು, ಗಲಭೆಗಳನ್ನು ಪ್ರಚೋದಿಸಬಾರದು. ನಾವು ಅವರಿಗೆ ದೇವಸ್ಥಾನ ನಿರ್ಮಿಸುತ್ತೇವೆ ಮತ್ತು ಅಲ್ಲಿ ಅವರನ್ನು ಪೂಜಿಸಿ, ಪ್ರಸಾದ, ಹೂವುಗಳನ್ನು ಅರ್ಪಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಧಾನಿ ಮೋದಿ ಇತ್ತೀಚೆಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ, ಈ ರೀತಿಯ ಶಕ್ತಿಯು ಜೈವಿಕ ದೇಹದಿಂದ ಬರಲು ಸಾಧ್ಯವಿಲ್ಲ, ದೇವರು ಮಾತ್ರ ಅಂತಹ ಶಕ್ತಿಯನ್ನು ನೀಡಬಲ್ಲನು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಪುರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ ಜಗನ್ನಾಥ “ಮೋದಿಯ ಭಕ್ತ” ಎಂದು ಹೇಳಿದ್ದರು. ಈ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಂಬಿತ್ ಪಾತ್ರಾ ಕ್ಷಮೆ ಯಾಚಿಸಿದ್ದರು.

ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಮತಾ, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಅನೇಕ ಪ್ರಧಾನಿಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ, ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು, ನಾನು ಮನಮೋಹನ್ ಸಿಂಗ್, ರಾಜೀವ್ ಗಾಂಧಿ, ನರಸಿಂಹರಾವ್, ದೇವೇಗೌಡರ ಜೊತೆ ಕೆಲಸ ಮಾಡಿದ್ದೇನೆ, ಆದರೆ ಮೋದಿಯಂತೆ ಯಾರನ್ನು ನೋಡಿಲ್ಲ, ಅವರಂತಹ ಪ್ರಧಾನಿಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಜೂನ್ 1ರಂದು ನಡೆಯಲಿರುವ ಅಂತಿಮ ಹಂತದ ಮತದಾನದ ಹಿನ್ನೆಲೆ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ಇಬ್ಬರೂ ಕೋಲ್ಕತ್ತಾದಲ್ಲಿ ರೋಡ್‌ಶೋಗಳನ್ನು ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಉತ್ತರ ಮತ್ತು ದಕ್ಷಿಣ ಕೋಲ್ಕತ್ತಾದಲ್ಲಿ ಸುಮಾರು ಒಂಬತ್ತು ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆಯಲ್ಲಿ ರೋಡ್‌ಶೋಗಳನ್ನು ನಡೆಸಿದ್ದಾರೆ

Previous Post
17 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೆಲುವು, ಪ್ರಜ್ವಲ್ ರೇವಣ್ಣಗೆ ಸೋಲು ಸಾಧ್ಯತೆ: ಬಿಜೆಪಿ ಮೌಲ್ಯಮಾಪನ
Next Post
ಬಿಸಿಲಿನ ತಾಪಕ್ಕೆ ಪ್ರಜ್ಞೆ ತಪ್ಪಿದ ಶಾಲಾ ವಿದ್ಯಾರ್ಥಿಗಳು

Recent News