ಸಾವಿನ ಅಂಚಿನಲ್ಲಿರುವ ವ್ಯಕ್ತಿ ಹೇಳಿಕೆಗೆ ಹೆಚ್ಚು ಮಾನ್ಯತೆ: ಸುಪ್ರೀಂಕೋರ್ಟ್‌

ಸಾವಿನ ಅಂಚಿನಲ್ಲಿರುವ ವ್ಯಕ್ತಿ ಹೇಳಿಕೆಗೆ ಹೆಚ್ಚು ಮಾನ್ಯತೆ: ಸುಪ್ರೀಂಕೋರ್ಟ್‌

ನವದೆಹಲಿ, ಮೇ 31: ಸಾವಿನ ಅಂಚಿನಲ್ಲಿರುವ ವ್ಯಕ್ತಿಗಳು ಅಪರೂಪಕ್ಕೆ ಸುಳ್ಳು ಹೇಳುತ್ತಾರೆ ಮತ್ತು ಅವರ ಕೊನೆಯ ಮಾತುಗಳು ಕಾನೂನಿನ ದೃಷ್ಟಿಯಲ್ಲಿ ಹೆಚ್ಚು ಸ್ವೀಕಾರಾರ್ಹತೆಯನ್ನು ಮತ್ತು ಅಪಾರವಾದ ಮಾನ್ಯತೆಯನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಮಹಾರಾಷ್ಟ್ರದಲ್ಲಿ ಓರ್ವ ಅಪರಾಧಿಗೆ ಪತ್ನಿಯ ಹತ್ಯೆಗೆ ಸಂಬಂಧಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸುವಾಗ, ಸಾಯುತ್ತಿರುವ ವ್ಯಕ್ತಿಯ ಕೊನೆಯ ಮಾತುಗಳು ಪ್ರಾಮಾಣಿಕವಾಗಿರುತ್ತವೆ ಎಂದು ಕಾನೂನು ನಂಬುತ್ತದೆ ಎಂದು ಹೇಳಿದ್ದಾರೆ.
ಪೊಲೀಸ್ ಪೇದೆಯಾಗಿದ್ದ ಪತ್ನಿಯನ್ನು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ 2002ರಲ್ಲಿ ಅಂಬಾಜೋಗಿಯಲ್ಲಿ ಸಹೋದರನ ಜೊತೆ ಸೇರಿ ಕಟ್ಟಿಹಾಕಿ ಮತ್ತು ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ. ಆಕೆ ಸುಟ್ಟ ಗಾಯಗಳಿಂದ ಸಾಯುವ ಮೊದಲು ಆಕೆ ನೀಡಿದ ಹೇಳಿಕೆಯನ್ನು ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಮಹತ್ವದ್ದಾಗಿ ಪರಿಗಣಿಸಿತ್ತು. ಸಾಯುತ್ತಿರುವ ವೇಳೆ ನೀಡುವ ಹೇಳಿಕೆಗೆ ಸ್ವೀಕಾರಾರ್ಹತೆ ಹೆಚ್ಚಾಗಿರುತ್ತದೆ. ಏಕೆಂದರೆ ಸಾವಿನ ಅಂಚಿನಲ್ಲಿರುವಾಗ, ಸುಳ್ಳು ಹೇಳುವ ಪ್ರಸಂಗವು ಅಪರೂಪವಾಗಿ ಮಾತ್ರ ಕಂಡುಬರುತ್ತದೆ ಎಂದು ನ್ಯಾಯಮೂರ್ತಿ ಭುಯಾನ್ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ನ್ಯಾಯಾಲಯವು ವ್ಯಕ್ತಿಯ ಅಂತಿಮ ಹೇಳಿಕೆಯನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಬೇಕು. ಸಾಯುವ ಸಮಯದಲ್ಲಿ ನೀಡಿದ ಹೇಳಿಕೆಯನ್ನು ಪುರಾವೆಯ ತುಣುಕಾಗಿ ಅಥವಾ ಒಂದು ಸ್ವತಂತ್ರ ಸಾಕ್ಷಿಯಾಗಿ ಪರಿಗಣಿಸಬಹುದೆಂದು ಎಂದು ನ್ಯಾಯಾಲಯ ಹೇಳಿದೆ. ಸಾವಿನ ಸಮಯದಲ್ಲಿ ವ್ಯಕ್ತಿಯು ನೀಡುವ ಹೇಳಿಕೆಯು ದೃಢೀಕರಿಸಲ್ಪಡದೆ ಇದ್ದಲ್ಲಿ ಅದನ್ನು ಪುರಾವೆಯಾಗಿ ಪರಿಗಣಿಸಲಾಗದು ಎಂಬುದಕ್ಕೆ ಯಾವುದೇ ಕಾನೂನಿಲ್ಲವೆಂದು ಹೇಳಿದ್ದಾರೆ.
ಸಾವಿನಂಚಿನ ವ್ಯಕ್ತಿಯ ಹೇಳಿಕೆಯು ಪ್ರೇರಣೆ ಅಥವಾ ಕಲ್ಪನೆಯಲ್ಲ ಎಂದು ಖಚಿತಪಡಿಸಿಕೊಳ್ಳಬೇಕು, ಮೃತರು ಹೇಳಿಕೆ ನೀಡಲು ಯೋಗ್ಯ ಮತ್ತು ಸರಿಯಾದ ಸ್ಥಿತಿಯಲ್ಲಿರಬೇಕು. ಸಾವಿನಂಚಿನಲ್ಲಿರುವ ವ್ಯಕ್ತಿ ನೀಡುವ ಹೇಳಿಕೆ ನಿಜ ಮತ್ತು ಸ್ವಯಂಪ್ರೇರಿತವಾಗಿದೆ ಎಂದು ನ್ಯಾಯಾಲಯಕ್ಕೆ ದೃಢಪಟ್ಟರೆ ಅದನ್ನು ಆಧರಿಸಿ ಅಪರಾಧ ನಿರ್ಣಯವನ್ನು ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಒಂದು ವೇಳೆ ಸಾಯುವ ಮುನ್ನ ವ್ಯಕ್ತಿ ಕೊನೆಯ ಬಾರಿಗೆ ಹಲವು ಹೇಳಿಕೆಯನ್ನು ನೀಡಿದ್ದರೆ, ಈ ಪ್ರತಿಯೊಂದು ಹೇಳಿಕೆಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಬೇಕು. ಹೇಳಿಕೆಯಲ್ಲಿ ಕೆಲವು ವ್ಯತ್ಯಾಸಗಳ ಕಾರಣದಿಂದ ಒಂದು ಹೇಳಿಕೆಯನ್ನು ತಿರಸ್ಕರಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ.

Previous Post
ಹೆಚ್ಚಿನ ನೀರು ಕೋರಿ ಸುಪ್ರೀಂ ಮೆಟ್ಟಿಲೇರಿದ ದೆಹಲಿ ಸರ್ಕಾರ
Next Post
ಹೆಚ್ಚುತ್ತಿರುವ ಬಿಸಿಗಾಳಿ: ‘ತುರ್ತು ಪರಿಸ್ಥಿತಿ’ ಘೋಷಣೆಗೆ ಒತ್ತಾಯ

Recent News