ಉತ್ತರ-ದಕ್ಷಿಣ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ ರಾಹುಲ್‌ ಗಾಂಧಿ

ಉತ್ತರ-ದಕ್ಷಿಣ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ ರಾಹುಲ್‌ ಗಾಂಧಿ

ತಿರುವನಂತಪುರಂ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸ್ಪರ್ಧಿಸಿದ್ದ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ್ದಾರೆ. ದೇಶದ ದಕ್ಷಿಣ ಭಾಗವಾದ ಕೇರಳದ ವಯನಾಡು ಮತ್ತು ಉತ್ತರ ಭಾಗವಾದ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿ ಗೆದ್ದು ಬೀಗಿದ್ದಾರೆ.

2019ರಲ್ಲಿಯೂ ಎರಡು ಕಡೆ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ ಅವರಿಗೆ ಸಿಹಿ-ಕಹಿಯ ಫಲಿತಾಂಶ ಎದುರಾಗಿತ್ತು. ವಯನಾಡಿನಲ್ಲಿ ಗೆದ್ದಿದ್ದರೆ, ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋಲು ಕಂಡಿದ್ದರು. ಈ ಬಾರಿ ಎರಡೂ ಕಡೆ ವಿಜಯದ ನಗೆ ಬೀರಿದ್ದಾರೆ.

ವಯನಾಡಿನಲ್ಲಿ 3 ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯ ಗಳಿಸಿರುವ ರಾಹುಲ್‌ ಗಾಂಧಿ ರಾಯ್‌ಬರೇಲಿಯಲ್ಲಿ 2 ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಇಲ್ಲಿ ಸಿಪಿಐಯಿಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆಯನಿ ರಾಜಾ ಮತ್ತು ಬಿಜೆಪಿಯಿಂದ ಕೆ.ಸುರೇಂದ್ರನ್‌ ಸ್ಪರ್ಧಿಸಿದ್ದರು. ಈ ಮೂಲಕ ಕಠಿಣ ಸ್ಪರ್ಧೆ ಎದುರಾಗಿತ್ತು.

ರಾಯ್‌ಬರೇಲಿಯಲ್ಲಿ ಬಿಜೆಪಿ ದಿನೇಶ್‌ ಪ್ರತಾಪ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿತ್ತು. ಕಳೆದ ಬಾರಿ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಕಣಕ್ಕಿಳಿದಿದ್ದರು. ಆಗಲೂ ದಿನೇಶ್‌ ಪ್ರತಾಪ್‌ ಸಿಂಗ್‌ ಸವಾಲು ಒಡ್ಡಿದ್ದರು. ಆಗ ಸೋನಿಯಾ ಗಾಂಧಿ 2.22 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ರಾಹುಲ್‌ ಗಾಂಧಿ ಇದಕ್ಕೂ ಹೆಚ್ಚಿನ ಅಂತರದಿಂದ ಜಯ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಯ್‌ಬರೇಲಿಯನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತದೆ. ಈ ಬಾರಿ ಇದು ಮತ್ತೆ ಸಾಬೀತಾಗಿದೆ. ಈ ಕ್ಷೇತ್ರವನ್ನು ಸೋನಿಯಾ ಗಾಂಧಿ 2004ರಿಂದ ಪ್ರತಿನಿಧಿಸಿದ್ದರು. ಈ ಬಾರಿ ಅವರು ರಾಯ್‌ಬರೇಲಿಯನ್ನು ಮಗನಿಗೆ ಬಿಟ್ಟುಕೊಟ್ಟು ರಾಜ್ಯಸಭೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ಅಮೇಥಿ ಸೋಲಿನ ನೋವು ಮರೆಸಿದ ಗೆಲುವು

ರಾಹುಲ್‌ ಗಾಂಧಿ ಅವರು 2019ರಲ್ಲಿ ಅಮೇಥಿಯಲ್ಲಿ ಸ್ಪರ್ಧಿಸಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದರು. ಗಾಂಧಿ ಕುಟುಂಬದ ಪ್ರತಿಷ್ಠೆಯ ಕಣವಾಗಿದ್ದ ಅಮೇಥಿಯಲ್ಲಿನ ಸೋಲು ರಾಹುಲ್‌ ಗಾಂಧಿ ಮಾತ್ರವಲ್ಲ ಕಾಂಗ್ರೆಸ್‌ಗೆ ಬಹು ದೊಡ್ಡ ಶಾಕ್‌ ನೀಡಿತ್ತು. ಇದೀಗ ಆ ನೋವನ್ನು ಎರಡೂ ಕಡೆಯ ಭರ್ಜರಿ ಗೆಲುವು ಮರೆಸಿದೆ. ಈ ಬಾರಿಯೂ ಅಮೇಥಿಯಿಂದ ಬಿಜೆಪಿ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಿದ್ದು, ರಾಹುಲ್‌ ಗಾಂಧಿ ಬದಲು ಕಾಂಗ್ರೆಸ್‌ನಿಂದ ಕಿಶೋರ್‌ ಲಾಲ್‌ ಶರ್ಮಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 25 ವರ್ಷಗಳಲ್ಲಿ ಮೊದಲ ಬಾರಿಗೆ ಇಲ್ಲಿ ಗಾಂಧಿ ಕುಟುಂಬದ ಸದಸ್ಯರು ಸ್ಪರ್ಧಿಸಿರಲಿಲ್ಲ. ಸದ್ಯ ಸ್ಮೃತಿ ಇರಾನಿ ಸೋತಿದ್ದಾರೆ.

ಇತ್ತೀಚಿನ ಅಂಕಿ ಅಂಶ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 294 ಸ್ಥಾನಗಳಲ್ಲಿ ಮುಂದಿದ್ದರೆ ಕಾಂಗ್ರೆಸ್‌ ಈ ಬಾರಿ ಪುಟಿದೆದ್ದಿದೆ. ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಒಕ್ಕೂಟ 231 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ಗೆ ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ರಾಹುಲ್‌ ಗಾಂಧಿ ಇಂದು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Previous Post
ವಾರಣಾಸಿಯಲ್ಲಿ ಮೋದಿ ಜಯಭೇರಿ
Next Post
ಗೆದ್ದು ಇತಿಹಾಸ ನಿರ್ಮಿಸಿದ ಶಾಂಭವಿ ಚೌಧರಿ, ಎನ್​ಡಿಎ ಅಭ್ಯರ್ಥಿ ಈಗ ದೇಶದ ಅತಿ ಕಿರಿಯ ಸಂಸದೆ

Recent News