ಮಹಾರಾಷ್ಟ್ರದಲ್ಲಿ ಬಿಜೆಪಿ ಕಳಪೆ ಪ್ರದರ್ಶನ: ರಾಜೀನಾಮೆಗೆ ಪಡ್ನಾವೀಸ್ ಚಿಂತನೆ
ಮುಂಬೈ, ಜೂ. 5: ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಕಳಪೆ ಪ್ರದರ್ಶನದ ಹಿನ್ನೆಲೆ ನೈತಿಕ ಹೊಣೆಯನ್ನು ಹೊತ್ತ ಡಿಸಿಎಂ ದೇವೇಂದ್ರ ಪಡ್ನಾವೀಸ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ನಾನು ಹೈಕಮಾಂಡ್ನ ಯಾವುದೇ ನಿರ್ಧಾರಕ್ಕೆ ಬದ್ಧ, ನನ್ನನ್ನು ಸರ್ಕಾರದ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಬಿಜೆಪಿ ಹೈಕಮಾಂಡ್ಗೆ ಮನವಿ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕಾಗಿ ಶ್ರಮಿಸಲು ನನಗೆ ಅದು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ಮಹರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ, ಅಜಿತ್ ಪವಾರ್ ನೇತೃತ್ವದ ಸಮ್ಮಿಶ್ರ ಸರಕಾರವಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಕಳಪೆ ಪದರ್ಶನವನ್ನು ಮಾಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 23 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ರಾಜ್ಯದಲ್ಲಿ ಕೇವಲ 9 ಸ್ಥಾನಗಳಲ್ಲಿ ಮಾತ್ರ ಗೆಲುವನ್ನು ಸಾಧಿಸಿದೆ. ಎನ್ಡಿಎ ಮೈತ್ರಿ ಪಕ್ಷಗಳಾದ ಏಕನಾಥ್ ಶಿಂಧೆ ಶಿವಸೇನೆ 7, ಎನ್ಸಿಪಿ ಅಜಿತ್ ಪವಾರ್ ಬಣ 1 ಕ್ಷೇತ್ರಗಳಲ್ಲಿ ಮಾತ್ರ ಗೆಲುವನ್ನು ಕಂಡಿದೆ. ಇದು ಎನ್ಡಿಎ ಮೈತ್ರಿಕೂಟಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ಮಹರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟವು 30 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದೆ.
ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆಯ ವೇಳೆ ಮಹರಾಷ್ಟ್ರದಲ್ಲಿ ಎನ್ಡಿಎ ಮೈತ್ರಿ ಪಕ್ಷಗಳಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿತ್ತು. ಕುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದರು. ಇದಲ್ಲದೆ ಮರಾಠ ಮೀಸಲಾತಿ ಹೋರಾಟ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಇನ್ನೊಂದು ಕಡೆ ಮರಾಠರಿಗೆ ಒಬಿಸಿಯಡಿ ಮೀಸಲಾತಿಗೆ ಒಬಿಸಿಗಳು ವಿರೋಧವನ್ನು ವ್ಯಕ್ತಪಡಿಸಿದ್ದರು. ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಮರಾಠರಿಗೆ ಕುಂಬಿ ಜಾತಿ ಪ್ರಮಾಣಪತ್ರಗಳನ್ನು ನೀಡುವ ಸರ್ಕಾರದ ಉದ್ದೇಶಿತ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೂಡ ಹೇಳಿದ್ದರು.